ಧೂಮಪಾನ ಸಂಪೂರ್ಣ ನಿಷೇಧಕ್ಕೆ ಚಿಂತನೆ ಮಾಡಬೇಕಿದೆ: ಉಪಮುಖ್ಯಮಂತ್ರಿ ಪರಮೇಶ್ವರ್

ಬೆಂಗಳೂರು, ಜ. 4: ಕರ್ನಾಟಕ ರಾಜ್ಯದಲ್ಲಿ ಧೂಮಪಾನ ಸೇವನೆಯನ್ನು ಸಂಪೂರ್ಣ ನಿಷೇಧ ಮಾಡುವ ಸಂಬಂಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.
ಶುಕ್ರವಾರ ಮಲ್ಲೇಶ್ವರ ಬಿಬಿಎಂಪಿ ಕಚೇರಿಯಲ್ಲಿ ಧೂಮಪಾನ ಮುಕ್ತ ಬೆಂಗಳೂರು ಅಭಿಯಾನದ ವರದಿ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಗುಜರಾತ್ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅದೇ ಮಾದರಿಯಲ್ಲೆ ಕರ್ನಾಟಕ ರಾಜ್ಯದಲ್ಲಿಯೂ ಧೂಮಪಾನ ನಿಷೇಧಿಸುವ ಬಗ್ಗೆ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಇದರಿಂದ ಪೊಲೀಸರಿಗೆ ಹೆಚ್ಚು ಶ್ರಮ ಆಗಬಹುದು. ಆದರೆ, ಜನರಲ್ಲಿ ಪ್ರಬಲವಾಗಿ ಅರಿವು ಮೂಡಿಸಲು ಸಹಕಾರಿ ಎಂದು ಅವರು ಹೇಳಿದರು.
ಮಾದಕ ವಸ್ತುಗಳ (ಡ್ರಗ್) ಸೇವನೆ ನಿಯಂತ್ರಣಕ್ಕೆ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದ ಅಭಿಯಾನ ಮಾಡಲಾಗುತ್ತಿದೆ. ಅದರಲ್ಲೂ ಕಾಲೇಜು ಆವರಣಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅಭಿಯಾನ ಯಶಸ್ವಿಯಾಗಿದೆ. ಈ ಅಭಿಯಾನದಲ್ಲೇ ಸಿಗರೇಟು ಸೇವನೆ ಸೇರಿಸಿ, ಕನಿಷ್ಠ ಪಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇವನೆಯಿಂದ ದೂರ ಉಳಿಯುವಂತೆ ಮಾಡಬೇಕಿದೆ. ಕಾಲೇಜು ಸಮೀಪ ಸಿಗರೇಟು ಮಾರಾಟದ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಸೂಚಿಸಿದರು.
ನಾನು ಕಾಲೇಜು ಓದುವ ಸಂದರ್ಭದಲ್ಲಿ ರಜೆ ಇದ್ದಾಗ ತುಮಕೂರಿಗೆ ತೆರಳುತ್ತಿದ್ದೆ. ಬಸ್‌ನಲ್ಲಿಯೇ ಹೋಗುತ್ತಿದೆ. ಬಸ್‌ನಲ್ಲಿ ಧೂಮಪಾನ ನಿಷೇಧ ಎಂದು ಬರೆದಿದ್ದರೂ ನನ್ನ ಪಕ್ಕ ಕೂರುತ್ತಿದ್ದ ವ್ಯಕ್ತಿ ಬೀಡಿ ಸೇದುತಿದ್ದರು. ಆ ವ್ಯಕ್ತಿಯೊಂದಿಗೆ ನಾನು ಸಾಕಷ್ಟು ಬಾರಿ ಜಗಳವಾಡಿದ್ದೆ. ಶೇ.72ರಷ್ಟು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಜನರು ಸಾವನ್ನಪ್ಪುತ್ತಿದ್ದಾರೆ. ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದರೂ, ತಮ್ಮ ಜೀವನವನ್ನೇ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಧೂಮಪಾನ ಮುಕ್ತ ಮಾಡಲು ಹೊರಟಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.







