ಭಾರತದ ಅರುಣಿಮಾ ಸಿನ್ಹಾ ಅಪ್ರತಿಮ ಸಾಧನೆ: ಕೃತಕ ಕಾಲಿನಲ್ಲೇ ಮೌಂಟ್ ವಿನ್ಸನ್ ಏರಿದ ದಿಟ್ಟೆ

ಹೊಸದಿಲ್ಲಿ, ಜ.4: ಕೃತಕ ಕಾಲಿದ್ದರೂ ದಿಟ್ಟತನದಿಂದ 2013ರಲ್ಲಿ ಮೌಂಟ್ ಎವರೆಸ್ಟ್ ಏರಿದ್ದ ಛಲಗಾತಿ ಅರುಣಿಮಾ ಸಿನ್ಹಾ ಇದೀಗ ಅಂರ್ಟಾಕ್ಟಿಕಾದಲ್ಲಿನ ಅತ್ಯಂತ ಎತ್ತರದ ಪರ್ವತ ಮೌಂಟ್ ವಿನ್ಸನ್ ಅನ್ನು ಏರಿದ ಪ್ರಥಮ ಆಂಪ್ಯುಟೀ (ಅಂಗವಿಚ್ಛೇದಿತ ವ್ಯಕ್ತಿ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅರುಣಿಮಾ ಅವರ ಸಾಧನೆಯನ್ನು ಕೊಂಡಾಡಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆಕೆಯನ್ನು ಭಾರತದ ಹೆಮ್ಮೆ ಎಂದೂ ಪ್ರಧಾನಿ ಬಣ್ಣಿಸಿದ್ದಾರೆ.
ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಸಿನ್ಹಾ ಅವರನ್ನು ಚಲಿಸುತ್ತಿರುವ ರೈಲೊಂದರಿಂದ ಡಕಾಯಿತರು 2011ರಲ್ಲಿ ದೂಡಿದ ನಂತ ಆಕೆ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು.
ಘಟನೆಯಿಂದ ಧೃತಿಗೆಡದ ಅರುಣಿಮಾ ತಮ್ಮ ಕೃತಕ ಕಾಲಿನ ಸಹಾಯದಿಂದ ಮೌಂಟ್ ಎವರೆಸ್ಟ್ ಏರಿ ಅಪ್ರತಿಮ ಸಾಹಸ ಪ್ರದರ್ಶಿಸಿದ್ದರು. ಆರು ಉಪಖಂಡಗಳಲ್ಲಿನ ಆರು ಪರ್ವತಶ್ರೇಣಿಗಳನ್ನು ಏರುವ ಕನಸನ್ನು ಅವರು ಕಂಡವರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಅವರು ಈ ಹಿಂದೆ ಮೌಂಟ್ ಎವರೆಸ್ಟ್ ಹೊರತಾಗಿ, ಮೌಂಟ್ ಕಿಲಿಮಂಜಾರೋ, ಮೌಂಟ್ ಎಬ್ರಸ್, ಮೌಂಟ್ ಕೊಸಿಯುಝ್ಕೊ ಹಾಗೂ ಮೌಂಟ್ ಅಕೊನಕಗುವಾ ಏರಿದ್ದಾರೆ.
ಒಂದು ಕಾಲನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಮಲಗಿರುವಾಗಲೇ ಪರ್ವತಾರೋಹಿಯಾಗುವ ಕನಸನ್ನು ತಾವು ಕಂಡಿದ್ದಾಗಿ ಅವರು ಹೇಳಿದ್ದಾರೆ. ತಮ್ಮ ಕುಟುಂಬವೇ ತಮ್ಮ ದೊಡ್ಡ ಸ್ಫೂರ್ತಿ ಎಂದೂ ಅವರು ತಿಳಿಸುತ್ತಾರೆ.







