ಮಂಗಳೂರಿನಲ್ಲಿ ‘ಝಂಬಾ-ಝುಂಬಾ’ ದಂಧೆ: ಪೊಲೀಸ್ ಫೋನ್ ಇನ್ ನಲ್ಲಿ ಆರೋಪ

ಮಂಗಳೂರು, ಜ.4: ಶಾರೀರಿಕ ಸಮತೋಲನ ಮತ್ತು ಮನರಂಜನೆಗಾಗಿ ನಗರದ ವಿವಿಧ ಕಡೆ ನಡೆಯುತ್ತಿರುವ ‘ಝಂಬಾ-ಝುಂಬಾ’ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ದಂಧೆಯಾಗಿ ಮಾರ್ಪಟ್ಟಿವೆ ಎಂದು ಕುಂಜತ್ತಬೈಲ್‌ನ ಮಹೇಶ್ ಎಂಬವರು ಆರೋಪಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದಲ್ಲಿ ಶುಕ್ರವಾರ ನಡೆದ 100ನೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಗರದ ಹಲವು ಕಡೆ ಝಂಬಾ-ಝುಂಬಾ ದಂಧೆಯಾಗಿ ಮಾರ್ಪಟ್ಟಿವೆ. ಇದು ಶಾರೀರಿಕ ಸಮತೋಲನದೊಂದಿಗೆ ಮನರಂಜನೆಯ ಕಾರ್ಯಕ್ರಮವಾಗಿದ್ದರೂ ಕೂಡ ಎಲ್ಲೆ ಮೀರುತ್ತಿವೆ. ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಕೆಲವು ಕಡೆ ತೃತೀಯ ಲಿಂಗಿಗಳನ್ನೂ ಬಳಸಿಕೊಂಡು ಕುಣಿಸಲಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದಿಷ್ಟ ಪ್ರಕರಣಗಳಿದ್ದರೆ ಲಿಖಿತ ದೂರು ನೀಡಬಹುದು. ಅದರ ಆಧಾರದ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಜಿಮ್ ಮತ್ತು ಡ್ಯಾನ್ಸ್ ಕ್ಲಬ್‌ಗಳ ವ್ಯವಸ್ಥಾಪಕರನ್ನು ಕರೆಸಿ ಮುನ್ನೆಚ್ಚರಿಕೆ ನೀಡಲಾಗುವುದು ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಮಧ್ಯೆ ಸಮನ್ವಯತೆಯ ಕೊರತೆ ಇದೆ. ಸಮಸ್ಯೆಗಳನ್ನು ಬೊಟ್ಟು ಮಾಡಿದರೆ ಪರಸ್ಪರ ಕೈ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಅಭಿವೃದ್ಧಿಗೆ ತೊಡಕುಂಟಾಗುತ್ತದೆ ಎಂದು ಬೋಳೂರಿನ ದಿವಾಕರ ರಾವ್ ಎಂಬವರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಕೆಳಹಂತದ ಅಧಿಕಾರಿಗಳಲ್ಲಿ ಸಮನ್ವಯತೆಯ ಕೊರತೆ ಇರಬಹುದು. ಆದರೆ ಹಿರಿಯ ಅಧಿಕಾರಿಗಳಲ್ಲಿ ಅಂತಹ ಸಮಸ್ಯೆ ಇಲ್ಲ. ಸಾರ್ವಜನಿಕರ ದೂರುಗಳನ್ನು ಪರಸ್ಪರ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.
ಫೋನ್ ಇನ್ ಕಾರ್ಯಕ್ರಮದಂತೆ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಜನಸಂಪರ್ಕ ಸಭೆಯನ್ನು ಆಯೋಜಿಸಬೇಕು ಎಂದು ಕಂಕನಾಡಿಯ ಆಲ್ವಿನ್ ಡಿಸೋಜ ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸಂದರ್ಶಿಸಲು ಅಥವಾ ಉಪಚರಿಸಲು ಹೋಗುವವರಿಗೆ ಆಸ್ಪತ್ರೆಗಳ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಕೆಲವು ಕಡೆ ರಸ್ತೆ ಬದಿಯಲ್ಲೇ ನಿಲ್ಲಿಸುವಂತಹ ಪ್ರಮೇಯ ಎದುರಾಗುತ್ತದೆ. ರಸ್ತೆ ಬದಿ ವಾಹನ ನಿಲ್ಲಿಸಿ ಆಸ್ಪತ್ರೆಗೆ ತೆರಳಿ ಮರಳುವಷ್ಟರಲ್ಲಿ ವಾಹನಗಳ ಟಯರ್‌ಗಳಿಗೆ ಸಂಚಾರ ಪೊಲೀಸರಿಂದ ಲಾಕ್ ಬಿದ್ದಿರುತ್ತದೆ. ಹಾಗಾಗಿ ಆಸ್ಪತ್ರೆಯ ಆವರಣದೊಳಗೇ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದು ಕುಂಜತ್ತಬೈಲ್‌ನ ಮಹೇಶ್ ಒತ್ತಾಯಿಸಿದರು.
ನಗರದಲ್ಲಿ ಫುಟ್‌ಪಾತ್‌ಗಳಿಲ್ಲ, ಹಂಪ್ಸ್‌ಗಳಿಲ್ಲ, ಟ್ರಾಫಿಕ್ ದಟ್ಟಣೆ ಕಡಿಮೆಯಾಗಿಲ್ಲ ಇತ್ಯಾದಿ ದೂರುಗಳು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂಬ ಸಲಹೆಗಳು ಕೂಡ ಕೇಳಿ ಬಂದವು.
100ನೆ ವಿಶೇಷ ಫೋನ್ ಇನ್ ಕಾರ್ಯಕ್ರಮವನ್ನು 10 ಗಂಟೆಯಿಂದ 11.10ರವರೆಗೆ ನಡೆಸಲಾಯಿತು. ಸುಮಾರು 37 ಕರೆಗಳು ಸ್ವೀಕರಿಸಲ್ಪಟ್ಟವು. ಕರೆ ಮಾಡಿದ ಬಹುತೇಕ ಮಂದಿ ಪೊಲೀಸ್ ಇಲಾಖೆಯನ್ನು ಅಭಿನಂದಿಸಲು ಮರೆಯಲಿಲ್ಲ. ಫೋನ್ ಕರೆ ಸ್ವೀಕರಿಸಿದ ಆಯುಕ್ತರು ಕೂಡ ಅತ್ಯಂತ ಲವಲವಿಕೆಯಿಂದಲೇ ಅಭಿನಂದನೆಗಳನ್ನು ಸ್ವೀಕರಿಸಿದರಲ್ಲದೆ ಸಲಹೆ-ಸೂಚನೆಗಳನ್ನೂ ಬಯಸಿದರು.
ಈ ಹಿಂದಿನ ಆಯುಕ್ತ ಚಂದ್ರಶೇಖರ್ 2016ರ ಆಗಸ್ಟ್ 5ರಂದು ಇದನ್ನು ಆರಂಭಿಸಿದ್ದು, ಅವರ ಅವಧಿಯಲ್ಲಿ 44 ಫೋನ್ ಇನ್ ಕಾರ್ಯಕ್ರಮಗಳಾಗಿವೆ. ಆ ಬಳಿಕ ತನ್ನ ಅಧಿಕಾರವಧಿಯಲ್ಲಿ 56 ಕಾರ್ಯಕ್ರಮಗಳು ಜರುಗಿವೆ. ಒಟ್ಟು 2,242 ಫೋನ್ ಕರೆಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 1,584 ಸಂಚಾರ ವಿಭಾಗಕ್ಕೆ ಮತ್ತು 359 ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಾಗಿವೆ. 97 ಇತರ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಎಲ್ಲಾ ಕರೆಗಳನ್ನೂ ಅತ್ಯಂತ ತಾಳ್ಮೆಯಿಂದ ಸ್ವೀಕರಿಸಲಾಗಿದೆ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಸುಮಾರು 300ರಷ್ಟು ಕರೆಗಳಿಗೆ ತಕ್ಷಣ ಸ್ಪಂದಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನುಡಿದರು.
ಫೋನ್-ಇನ್ ಕಾರ್ಯಕ್ರಮ ಹಾಗೂ ಟ್ರಾಫಿಕ್ ಸುಧಾರಣೆಗೆ ಸಹಕರಿಸಿದ 97ರ ಹರೆಯದ ಜೋ ಗೋನ್ಸಾಲ್ವಿಸ್ , ಪ್ರಾನ್ಸಿಸ್ ಮಾಕ್ಸಿಮ್ ಮೋರಾಸ್ (ಟ್ರಾಫಿಕ್ ವಾರ್ಡನ್), ಜೊಸೆಫ್ ಡಿಸೋಜ (ಸಾಮಾಜಿಕ ಕಾರ್ಯಕರ್ತರು), ರಮೇಶ್ ಚಿಕ್ಕಮಗಳೂರು (ಮಾದರಿ ಅಟೋ ಚಾಲಕ),ಫೋನ್-ಇನ್‌ನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಎಎಸ್ಸೈ ಯೂಸುಫ್, ಎಚ್‌ಸಿ ಪುರುಷೋತ್ತಮ್, ವರುಣ್ ಆಳ್ವ, ಇವೆಂಟ್‌ನ ಗಣೇಶ್ ನಾಯಕ್ ಮುಲ್ಕಿ ಅವರನ್ನು ಗೌರವಿಸಲಾಯಿತು.
2018ರಲ್ಲಿ ಪೊಲೀಸ್ ಇಲಾಖೆಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಣ್ಣಗುಡ್ಡ ಸರಕಾರಿ ಶಾಲೆಯ ವಿದ್ಯಾರ್ಥಿಗಳಾದ ಬಸವರಾಜ್ ನಾ ಹುಳ್ಳಲ್ಲಿ, ವೀರೇಶ್ ಬಸವರಾಜ್ ಸತ್ಯಾಲ್, ಜ್ಯೋತಿ ಅವರಿಗೆ ಬಹುಮಾನ ವಿತರಿಸಲಾಯಿತು.
ದ.ಕ.ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ಇಲಾಖೆಯ ಪರವಾಗಿ ಆಯುಕ್ತ ಟಿ.ಆರ್.ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಯಶಸ್ಸಿಗೆ ಮಾಧ್ಯಮದವರ ಪಾತ್ರವೂ ಅಪಾರ ಎಂದು ಬಣ್ಣಿಸಿದ ಆಯುಕ್ತರು ಹಾಜರಿದ್ದ ಎಲ್ಲಾ ಪತ್ರಕರ್ತರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.







