ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ದರ ಏರಿಕೆ

ಬೆಂಗಳೂರು, ಜ.4: ರಾಜ್ಯ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರವನ್ನು 2018ನೆ ಸಾಲಿನ ಸೆ.17ರ ಪೂರ್ವದಲ್ಲಿ ಇದ್ದಂತೆ ಶೇ.32 ಮತ್ತು ಶೇ.21ಕ್ಕೆ ಪರಿಷ್ಕರಿಸಿದೆ.
ಸರಕಾರವು ಕಳೆದ ಸಾಲಿನ ಜು.15ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರವನ್ನು ಕ್ರಮವಾಗಿ ಶೇ.30 ರಿಂದ ಶೇ.32ಕ್ಕೆ ಮತ್ತು ಶೇ.19 ರಿಂದ ಶೇ.21ಕ್ಕೆ ಹೆಚ್ಚಳ ಮಾಡಿತ್ತು. ಇದರಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮೊತ್ತವು ತಲಾ ಲೀಟರ್‌ಗೆ 1.14 ರೂ.ಮತ್ತು 1.12 ಹೆಚ್ಚುವರಿಯಾಗಿ ಸಂಗ್ರಹಣೆಯಾಗುತ್ತಿತ್ತು.
ನಂತರ, ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೂಲ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದುದನ್ನು ಗಮನಿಸಿ ಗ್ರಾಹಕರಿಗೆ ತೆರಿಗೆ ಭಾರವನ್ನು ಕಡಿಮೆ ಮಾಡುವ ದೃಷ್ಟಿಯಿಂದ 2018ನೆ ಸಾಲಿನ ಸೆ.17ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ ಸಂಗ್ರಹವಾಗುತ್ತಿದ್ದ ತೆರಿಗೆ ಮೊತ್ತವನ್ನು 2 ರೂ.ಗಳಷ್ಟು ಕಡಿಮೆ ಮಾಡಲಾಯಿತು. ಇದರ ಪರಿಣಾಮವಾಗಿ ಪೆಟ್ರೋಲ್ ಮೇಲಿನ ತೆರಿಗೆ ದರವು ಶೇ.32 ರಿಂದ ಶೇ.28.75 ಮತ್ತು ಡೀಸೆಲ್ ಮೇಲಿನ ತೆರಿಗೆ ದರವು ಶೇ.21 ರಿಂದ ಶೇ.17.73ಕ್ಕೆ ಇಳಿಕೆಯಾದವು.
ಕೇಂದ್ರ ಸರಕಾರವು 2018ನೆ ಸಾಲಿನ ಅ.5ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಶುಲ್ಕವನ್ನು ಪ್ರತಿ ಲೀಟರ್‌ಗೆ 1.50 ರೂ.ಕಡಿತಗೊಳಿಸಿದಲ್ಲದೆ, ಆಯಿಲ್ ಮಾರ್ಕೆಟಿಂಗ್ ಕಂಪೆನಿಗಳೂ ತಮ್ಮ ಲಾಭಾಂಶದಲ್ಲಿ ಪ್ರತಿ ಲೀಟರ್‌ಗೆ 1 ರೂ.ಕಡಿತಗೊಳಿಸಲು ಸೂಚಿಸಿತ್ತು.
ಕಳೆದ ಎರಡೂವರೆ ತಿಂಗಳುಗಳಿಂದ ಸತತವಾಗಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಇಳಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಮೂಲ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಇದು ರಾಜ್ಯದ ರಾಜಸ್ವ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರವನ್ನು 2018ನೆ ಸಾಲಿನ ಸೆ.17ರ ಪೂರ್ವದಲ್ಲಿ ಇದ್ದಂತೆ ಶೇ.32 ಮತ್ತು ಶೇ.21ಕ್ಕೆ ಪರಿಷ್ಕರಿಸಲಾಗಿದೆ. ಅದಾಗ್ಯೂ ಇತರ ರಾಜ್ಯಗಳಿಗೆ ಹೋಲಿಸಿದಾಗ, 2019ನೆ ಸಾಲಿನ ಜನವರಿ 1ರಂದು ಇದ್ದ ಮೂಲ ಬೆಲೆಯಂತೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಂತಿಮ ಮಾರಾಟ ಬೆಲೆಯು ಕಡಿಮೆ ಇದೆ.







