ಸರ್ಜಿಕಲ್ ದಾಳಿ ‘ಭಾರತೀಯ ಕಲ್ಪನೆಯ ಕೂಸು’ ಎಂದ ಪಾಕ್

ಇಸ್ಲಾಮಾಬಾದ್, ಜ. 4: 2016ರಲ್ಲಿ ಭಾರತ ನಡೆಸಿರುವ ಸರ್ಜಿಕಲ್ ದಾಳಿಯು ‘ಭಾರತೀಯ ಕಲ್ಪನೆಯ ಕೂಸು’ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. ‘‘ಇಂಥ ಯಾವುದೇ ಘಟನೆ ನಡೆದಿಲ್ಲ’’ ಎಂಬುದಾಗಿ ಅದು ಪುನರುಚ್ಚರಿಸಿದೆ.
2016 ಸೆಪ್ಟಂಬರ್ 29ರಂದು ಗಡಿ ನಿಯಂತ್ರಣ ರೇಖೆಯ ಪಾಕಿಸ್ತಾನದ ಭಾಗದಲ್ಲಿರುವ ಭಯೋತ್ಪಾದಕರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಲಾಗಿದೆ ಎಂದು ಭಾರತೀಯ ಸೇನೆಯು ಘೋಷಿಸಿದೆ.
ವಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ, ಪಾಕಿಸ್ತಾನ ವಿದೇಶ ಕಚೇರಿ ವಕ್ತಾರ ಮುಹಮ್ಮದ್ ಫೈಝಲ್ ಈ ವಿಷಯ ಹೇಳಿದರು.
ಹೊಸ ವರ್ಷದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ದಾಳಿಗಳ ಬಗ್ಗೆ ಮಾತನಾಡಿರುವುದರ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
‘‘ಅಂಥ ಯಾವುದೇ ಘಟನೆಯು ಅಂದು ನಡೆದಿಲ್ಲ. ಅದು ಭಾರತೀಯ ಕಲ್ಪನೆಯ ಕೂಸು. ತಮ್ಮ ಸರಕಾರದ ಹೇಳಿಕೆಗಳನ್ನು ಭಾರತೀಯ ಮಾಧ್ಯಮಗಳೇ ಶಂಕಿಸುತ್ತಿವೆ’’ ಎಂದು ಫೈಝಲ್ ನುಡಿದರು.
Next Story





