ಪ್ರವಾದಿ, ಶ್ರೀರಾಮನ ನಿಂದನೆಗೆ ಜೆಡಿಎಸ್ ಖಂಡನೆ
ಮಂಗಳೂರು, ಜ.4: ಖಾಸಗಿ ವಾಹಿನಿಯ ನಿರೂಪಕ ಅಜಿತ್ ಪ್ರವಾದಿ ಮುಹಮ್ಮದ್ (ಸ) ಮತ್ತು ಚಿಂತಕ ಪ್ರೊ.ಭಗವಾನ್ ಶ್ರೀರಾಮನ ವಿರುದ್ಧ ಹಾಗು ಏಸು ಕ್ರಿಸ್ತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬಿಂಬಿಸುವುದನ್ನು ದ.ಕ.ಜಿಲ್ಲಾ ಜಾತ್ಯತೀತ ಜನತಾ ದಳ ಖಂಡಿಸಿದೆ.
ಶುಕ್ರವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾರೇ ಮಾಡಿದರೂ ಕೂಡ ಸಹಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ವಿದೇಶದಿಂದ ಬಂದೊಡನೆ ಘಟನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದರು.
ಮಲ್ಪೆಯಲ್ಲಿ ಮೀನುಗಾರರ ನಾಪತ್ತೆಯಾಗಿ ಹಲವು ದಿನಗಳಾದರೂ ಕೂಡ ಇನ್ನೂ ಅವರು ಪತ್ತೆಯಾಗದಿರುವುದು ವಿಪರ್ಯಾಸ. ಅವರ ಪತ್ತೆಗೆ ಉಡುಪಿ ಜಿಲ್ಲಾಡಳಿತ ತುರ್ತು ಕ್ರಮ ಜರುಗಿಸಬೇಕಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಷಯವನ್ನು ಬಿಜೆಪಿ ರಾಜಕೀಯಗೊಳಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಕೇರಳ ಸರಕಾರ ಅದನ್ನು ಪಾಲಿಸುತ್ತದೆ. ಹೀಗಿರುವಾಗ ಬಿಜೆಪಿಯು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧವಾಗಿ ಜನರನ್ನು ರೊಚ್ಚಿಗೆಬ್ಬಿಸುವುದು ಖಂಡನೀಯ ಎಂದು ವಿಟ್ಲ ಮುಹಮ್ಮದ್ ಕುಂಞಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ಪಕ್ಷದ ಮುಖಂಡರಾದ ವಸಂತ ಪೂಜಾರಿ, ಸುಶೀಲ್ ನೊರೊನ್ಹಾ, ರಾಮ್‌ಗಣೇಶ್, ಮುನೀರ್ ಮುಕ್ಕಚೇರಿ, ರತ್ನಾಕರ ಸುವರ್ಣ, ನಾಸಿರ್ ಬಂದರ್, ಮುಹಮ್ಮದ್ ಸಾಲಿಹ್ ಮರವೂರು, ಪ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







