ಬ್ಲಾಕ್‌ಬಾಕ್ಸ್ ಶೋಧ ನಿಲ್ಲಿಸಿದ ಲಯನ್ ಏರ್: ಸರಕಾರಿ ಸಂಸ್ಥೆಯ ತನಿಖೆ ಶೀಘ್ರದಲ್ಲಿ

ಜಕಾರ್ತ (ಇಂಡೋನೇಶ್ಯ), ಜ. 4: ಅಕ್ಟೋಬರ್‌ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡ ತನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್)ನ ಶೋಧ ಕಾರ್ಯಾಚರಣೆಯನ್ನು ಲಯನ್ ಏರ್ ವಿಮಾನಯಾನ ಸಂಸ್ಥೆ ನಿಲ್ಲಿಸಿದೆ
ಆದರೆ, ತಾವು ತಮ್ಮದೇ ಆದ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಆರಂಭಿಸುವುದಾಗಿ ಇಂಡೋನೇಶ್ಯದ ತನಿಖಾಧಿಕಾರಿಗಳು ಹೇಳಿದ್ದಾರೆ.
ಅಕ್ಟೋಬರ್ 29ರಂದು ರಾಜಧಾನಿ ಜಕಾರ್ತದಿಂದ ಪಂಗ್‌ಕಲ್ ಪಿನಂಗ್ ಪಟ್ಟಣಕ್ಕೆ ಹಾರುತ್ತಿದ್ದ ಲಯನ್ ಏರ್ ಜೆಟಿ610 ವಿಮಾನವು ಹಾರಾಟ ಆರಂಭಿಸಿದ 13 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತು. ಬಳಿಕ ಅದು ಜಾವಾ ಸಮುದ್ರದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲ 189 ಮಂದಿ ಮೃತಪಟ್ಟಿದ್ದಾರೆ.
ಪ್ರಧಾನ ಅವಶೇಷ ಮತ್ತು ಸಿವಿಆರ್ ಆರಂಭಿಕ ಶೋಧದಲ್ಲಿ ಪತ್ತೆಯಾಗಿಲ್ಲ.
ವಿಮಾನಯಾನ ಕಂಪೆನಿಯು ಎಂಪಿವಿ ಎವರೆಸ್ಟ್ ಹಡಗಿನ ಮೂಲಕ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು.
ಹಡಗಿನ ಮೂಲಕ ನಡೆಸಲಾಗುತ್ತಿದ್ದ ಶೋಧ ಶನಿವಾರ ಕೊನೆಗೊಂಡಿದೆ ಎಂದು ಲಯನ್ ಏರ್ ಗ್ರೂಪ್‌ನ ವಕ್ತಾರ ದನಂಗ್ ಮಂಡಲ ‘ರಾಯ್ಟರ್ಸ್’ಗೆ ತಿಳಿಸಿದರು.
ಆದಾಗ್ಯೂ, ರಾಷ್ಟ್ರೀಯ ಸಾರಿಗೆ ಸುರಕ್ಷಾ ಆಯೋಗವು ಬ್ಲಾಕ್‌ಬಾಕ್ಸ್‌ಗಾಗಿ ತನ್ನದೇ ಆದ ಶೋಧವನ್ನು ಸಾಧ್ಯವಾದಷ್ಟು ಬೇಗ ಆರಂಭಿಸುವುದು ಎಂದು ಆಯೋಗದ ವಕ್ತಾರರೊಬ್ಬರು ತಿಳಿಸಿದರು.







