ಒಬಿಸಿಗಳ ಮೀಸಲಾತಿ ಅನುಕ್ರಮಣಿಕೆ ಕುರಿತು ಚರ್ಚೆಗೆ ಸರಕಾರ ಸಿದ್ಧ: ಸಚಿವ ಜಿತೇಂದ್ರ ಸಿಂಗ್

ಹೊಸದಿಲ್ಲಿ,ಜ.4: ಇತರ ಹಿಂದುಳಿದ ವರ್ಗಗಳ(ಒಬಿಸಿ) ಮೀಸಲಾತಿ ಅನುಕ್ರಮಣಿಕೆ ಕುರಿತು ಚರ್ಚೆಗೆ ಸರಕಾರವು ಸಿದ್ಧವಿದೆ ಮತ್ತು ಒಬಿಸಿಗಳ ಉಪವರ್ಗೀಕರಣಕ್ಕಾಗಿ ಸಮಿತಿಯೊಂದನ್ನು ಈಗಾಗಲೇ ರಚಿಸಿದೆ ಎಂದು ಪ್ರಧಾನಿ ಕಚೇರಿಯಲ್ಲಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ನಿವೃತ್ತ ನ್ಯಾಯಾಧೀಶೆ ಜಿ.ರೋಹಿಣಿ ನೇತೃತ್ವದ ಸಮಿತಿಯು ಅಕ್ಟೋಬರ್,2017ರಿಂದ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಮೇ 31ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಅದಕ್ಕೆ ಸೂಚಿಸಲಾಗಿದೆ ಎಂದರು.
ಮೀಸಲಾತಿ ಸೌಲಭ್ಯಗಳನ್ನು ಜಾರಿಗೊಳಿಸಲು ನೂತನ ‘ವೇಟೆಡ್ ಇಂಡೆಕ್ಸ್ ಸಿಸ್ಟಮ್’ನ್ನು ಅಳವಡಿಸಿಕೊಳ್ಳಲು ಆಗ್ರಹಿಸಿ ಬಿಜೆಪಿ ಸದಸ್ಯ ವಿಕಾಸ ಮಹಾತ್ಮೆ ಅವರು ಸಲ್ಲಿಸಿದ್ದ ಖಾಸಗಿ ನಿರ್ಣಯಕ್ಕೆ ಸಚಿವರು ಉತ್ತರಿಸುತ್ತಿದ್ದರು. ಈ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಸುಸಂಗತ ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಪರಿಗಣಿಸಿ ಮೀಸಲಾತಿಯಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ.
ಕೇಂದ್ರ ಮಟ್ಟದಲ್ಲಿ ಒಬಿಸಿಗಳಿಗಾಗಿರುವ ಎಲ್ಲ ಮೀಸಲಾತಿ ಸೌಲಭ್ಯಗಳ ಶೇ.97ರಷ್ಟನ್ನು ಶೇ.25 ಒಬಿಸಿಗಳು ಪಡೆದುಕೊಂಡಿದ್ದಾರೆ ಮತ್ತು ಶೇ.37ರಷ್ಟು ಒಬಿಸಿಗಳಿಗೆ ಯಾವುದೇ ಪ್ರಾತಿನಿಧ್ಯ ದೊರಕಿಲ್ಲ ಎಂದು ಮಹಾತ್ಮೆಯವರ ನಿರ್ಣಯವು ಬೆಟ್ಟು ಮಾಡಿತ್ತು.







