ಇಸ್ಲಾಂ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಧರ್ಮ: ಲಕ್ಷ್ಮೀ ಶಂಕರಾಚಾರ್ಯ ಶ್ರೀ

ಮಂಗಳೂರು, ಜ.4: ಇಸ್ಲಾಂ ಜಗತ್ತಿಗೆ ಶಾಂತಿ, ಮಾನವೀಯತೆ ವ್ಯವಹಾರಿಕ ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ ಧರ್ಮವಾಗಿದೆ ಎಂದು ಉತ್ತರಪ್ರದೇಶದ ಕಾನ್‌ಪುರದ ಚಿಂತಕ, ವಾಗ್ಮಿ ಲಕ್ಷ್ಮೀ ಶಂಕರಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್(ಎಚ್‌ಐಎಫ್)ನಿಂದ ಮುಹಮ್ಮದ್ ಪೈಗಂಬರ್ ಸಂದೇಶ ಕಾರ್ಯಕ್ರಮದಲ್ಲಿ ‘ಜಿಹಾದ್ ಮತ್ತು ಇಸ್ಲಾಮ್’ ವಿಷಯದಲ್ಲಿ ಉಪನ್ಯಾಸ ನೀಡಿದ ಸ್ವಾಮೀಜಿ, ಇಸ್ಲಾಂ ವ್ಯಕ್ತಿಯ ಕಾಯ, ವಾಚ, ಮನಸಾ ಹಿಂಸೆಗೆ ಬೆಂಬಲ ನೀಡುವ ಧರ್ಮವಲ್ಲ. ಆ ಕಾರಣದಿಂದ ಇಸ್ಲಾಂ ಎಂದರೆ ಶಾಂತಿಯ ಪ್ರತಿಪಾದನೆಯ ಧರ್ಮ ಎನ್ನುತ್ತೇವೆ. ಅನ್ಯಾಯ, ಅಧರ್ಮದ ವಿರುದ್ಧ ಪ್ರವಾದಿ ಮುಹಮ್ಮದ್‌ರು ಸಾರಿದ ಧರ್ಮ ಯುದ್ಧ ಜಿಹಾದ್. ಅದನ್ನು ಬೇರೆ ರೀತಿ ಅರ್ಥೈಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.
ಪೋಷಕರು ಮಕ್ಕಳಿಗೆ ಸಮಯ ಮೀಸಲಿಡಲಿ: ಆಧುನಿಕ ಯುಗದಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಅನ್ಯೋನ್ಯ ಸಂಬಂಧ ಹೆಚ್ಚಬೇಕು. ಪೋಷಕರು ತಮ್ಮ ಒತ್ತಡದ ಬದುಕಿನ ನಡುವೆ ಮಕ್ಕಳಿಗಾಗಿ ಸಮಯವನ್ನು ಮೀಸಲಿಡಬೇಕು ಎಂದು ಇಸ್ಲಾಮಿಕ್ ರಿಸರ್ಚ್ ಸೆಂಟರ್‌ನ ಅಧ್ಯಕ್ಷ ಅಡ್ವೋಕೇಟ್ ಫೈಝ್ ಸೈಯದ್ ಸಲಹೆ ನೀಡಿದರು.
‘ಆಧುನಿಕ ಯುಗದಲ್ಲಿ ಪೋಷಕರ ಪಾತ್ರ’ ವಿಷಯದಲ್ಲಿ ಉಪನ್ಯಾಸ ನೀಡಿ ಅವರು, ಕಳೆದ 10 ವರ್ಷಗಳಲ್ಲಿ ಜಗತ್ತು ತುಂಬಾ ವೇಗವಾಗಿ ಬದಲಾಗುತ್ತಿದೆ. ಆಧುನಿಕ ಯುಗದಲ್ಲಿ ಕಾಲಮಾನಕ್ಕೆ ತಕ್ಕಂತೆ ಜನರು ಬದಲಾಗುತ್ತಿದ್ದಾರೆ. ಇದು ಒಳ್ಳೆಯ ವಿಷಯವಾದರೂ ಪೋಷಕರು ಮಕ್ಕಳ ಪಾಲನೆಯಿಂದ ಹೊರಗುಳಿಯುವಂತಿಲ್ಲ. ಒತ್ತಡದ ಜೀವನದಲ್ಲಿ ಮಕ್ಕಳ ಇಷ್ಟದ ವಿಷಯಗಳ ಬಗ್ಗೆ ಚರ್ಚಿಸಿ ಎಂದು ಹೇಳಿದರು.
ತಂದೆ-ತಾಯಿ ಇಬ್ಬರೂ ಉದ್ಯೋಗಸ್ಥರಿರುತ್ತಾರೆ. ಕಚೇರಿಗಳ ಸಮಸ್ಯೆಗಳನ್ನು ಮನೆವರೆಗೂ ತರುತ್ತಾರೆ. ಸದಾ ಮೊಬೈಲ್‌ಗಳಲ್ಲಿಯೇ ಪೋಷಕರು ಮುಳುಗಿರುತ್ತಾರೆ. ಹೀಗಾದಲ್ಲಿ ಮಕ್ಕಳು ತಮ್ಮ ಪೋಷಕರಿಂದ ಪ್ರೀತಿ, ವಿಶ್ವಾಸವನ್ನು ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಕ್ರೀಡಾ ಜಗತ್ತು ಹೆಚ್ಚು ಸುದ್ದಿಯಲ್ಲಿದೆ. ಶಾಲಾ ಕ್ರೀಡಾಕೂಟದಲ್ಲಿ ಬೇರೆ ಮಕ್ಕಳು ಪ್ರಶಸ್ತಿ, ಮೆಡಲ್ ಗಳನ್ನು ತಂದರೆ ತಮ್ಮ ಮಕ್ಕಳು ಪ್ರಶಸ್ತಿ ತರುತ್ತಿಲ್ಲ ಎನ್ನುವ ಪೋಷಕರು ಮಕ್ಕಳಿಗೆಂದು ಎಷ್ಟು ಸಮಯ ನೀಡುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದಲ್ಲಿ ಎಷ್ಟರ ಪ್ರಮಾಣದಲ್ಲಿ ಸಹಕರಿಸುತ್ತಾರೆ ಎನ್ನುವುದನ್ನು ಪೋಷಕರು ತಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಪೋಷಕರನ್ನು ಅನುಸರಿಸಿ ಮಕ್ಕಳೂ ಮೊಬೈಲ್ ಗಳನ್ನು ಬಳಸುತ್ತಿದ್ದಾರೆ. ಪರಿಣಾಮ ಸ್ಮಾರ್ಟ್ ಫೋನ್‌ಗಳ ಬಳಕೆಯಿಂದ ಸೃಜನಶೀಲತೆ ಕಳೆದು ಕೊಳ್ಳುತ್ತಿದ್ದಾರೆ. ಮೊಬೈಲ್, ಗ್ಯಾಜೆಟ್, ಅಂತರ್ಜಾಲಕ್ಕೆ ಬಲಿಯಾಗಿ ಗೀಳನ್ನು ಅಂಟಿಸಿಕೊಳ್ಳುತ್ತಿದ್ದಾರೆ. ಇದು ಮಕ್ಕಳ ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಅಧ್ಯಕ್ಷ ನಾಜಿಮ್ ಎಸ್.ಎಸ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾರಂಭದ ಸಂಚಾಲಕ, ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್‌ನ ಸಾಜಿದ್ ಎ.ಕೆ. ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಬಾಷಿತ್ ಕಿರಾಅತ್ ಪಠಿಸಿದರು. ಮೊಕ್ಸಿತ್ ಸ್ವಾಗತಿಸಿದರು. ಬಿಲಾಲ್ ರೈಫ್ ಕಾರ್ಯಕ್ರಮ ನಿರೂಪಿಸಿದರು. ಮಿಶಾಲ್ ವಂದಿಸಿದರು.







