ಉಡುಪಿ ರೈಲ್ವೆ ನಿಲ್ದಾಣದಲ್ಲಿ ‘ಫ್ರೆಶ್ ಅಪ್’ ವಿಶ್ರಾಂತಿ ಕೇಂದ್ರ ಉದ್ಘಾಟನೆ

ಉಡುಪಿ, ಜ.4: ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚೈನ್ನೈ ಮೂಲದ ಫ್ರೆಶ್ ಮೈಂಡ್ಸ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಕೊಂಕಣ ರೈಲ್ವೆ ಹಾಗೂ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊ ರೇಶನ್(ಐಆರ್‌ಸಿಟಿಸಿ)ನ ಸಹಭಾಗಿತ್ವದೊಂದಿಗೆ ಇಂದ್ರಾಳಿಯ ರೈಲ್ವೆ ನಿಲ್ದಾಣ ದಲ್ಲಿ ಆರಂಭಿಸಿರುವ ‘ಫ್ರೆಶ್ ಅಪ್’ ವಿಶ್ರಾಂತಿ ಕೇಂದ್ರದ ಉದ್ಘಾಟನೆ ಶುಕ್ರವಾರ ನಡೆಯಿತು.
ಕೇಂದ್ರವನ್ನು ಉದ್ಘಾಟಿಸಿದ ಕಾರವಾರ ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ಮೆನೇಜರ್ ಮುಹಮ್ಮದ್ ಆಸೀಮ್ ಸುಲೈಮಾನ್ ಮಾತನಾಡಿ, ಫ್ರೆಶ್ ಅಪ್ ಕೊಂಕಣ ರೈಲ್ವೆ ಪ್ರಯಾಣಿಕರಿಗೆ ಐಷಾರಾಮಿ ವಾಸ್ತವ್ಯದೊಂದಿಗೆ ಸುಸಜ್ಜಿತವಾದ ವಿಶ್ರಾಂತಿ ಕೊಠಡಿಗಳನ್ನು ಒದಗಿಸುತ್ತಿದೆ. ರೈಲ್ವೆ ಪ್ರಯಾಣಿಕರು ವೆಬ್‌ಸೈಟ್ ಮೂಲಕ ಕೊಠಡಿಯನ್ನು ಕಾಯ್ದಿರಿಸಬಹುದಾಗಿದೆ ಎಂದು ತಿಳಿಸಿದರು.
24 ಗಂಟೆಗಳ ಕಾಲ ಸೇವೆ ನೀಡುವ ಈ ಕೇಂದ್ರವು ರಾತ್ರಿ ವೇಳೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗುತ್ತದೆ. ಈ ಸೇವೆಯು ಗಂಟೆಯ ಆಧಾರದಲ್ಲಿರುವುದರಿಂದ ಪ್ರಯಾಣಿಕರಿಗೆ ತುಂಬಾ ಸಹಕಾರಿ ಯಾಗಲಿದೆ. ಕನಿಷ್ಠ ಒಂದು ಗಂಟೆಗೆ 149ರೂ. ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ನಾಲ್ಕು ಸಿಂಗಲ್ ಬೆಡ್ ಹಾಗೂ ಎರಡು ಡಬಲ್ ಬೆಡ್‌ರೂಮ್‌ಗಳಿವೆ. ಹೆಚ್ಚು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಇಲ್ಲಿ ಐದು ಸಿಸಿ ಕ್ಯಾಮೆರಾಗಳನ್ನು ಅಳವಡಿಸ ಲಾಗಿದೆ ಎಂದರು.
ಮುಂಬೈ ಐಆರ್‌ಸಿಟಿಸಿಯ ಹೆಚ್ಚುವರಿ ಮಹಾಪ್ರಬಂಧಕ ರಾಜೇಶ್ ರಾಣ ಮಾತನಾಡಿ, ಕೊಂಕಣ ರೈಲ್ವೆಯ ಪ್ರಥಮ ಕೇಂದ್ರ ಇದಾಗಿದ್ದು, ಮುಂದೆ ಮಡ ಗಾಂವ್ ಹಾಗೂ ತಿವಿಮ್ ರೈಲ್ವೆ ನಿಲ್ದಾಣದಲ್ಲೂ ಈ ಕೇಂದ್ರವನ್ನು ಆರಂಭಿಸ ಲಾಗುವುದು. ಈ ಎರಡು ಕೇಂದ್ರಗಳಿಗೆ ಈಗಾಗಲೇ ಟೆಂಡರ್ ಕರೆಯಲಾ ಗಿದ್ದು, ಫೆಬ್ರವರಿ ತಿಂಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಫ್ರೆಶ್ ಅಪ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನಿಲ್ ರೆಡ್ಡಿ ಮಾತ ನಾಡಿ, ಪ್ರಸ್ತುತ ಫ್ರೆಶ್ ಅಪ್ ಕೇಂದ್ರವು ಹೈದರಾಬಾದಿನ ಕಚಿಗುಡ ರೈಲ್ವೆ ನಿಲ್ದಾಣ ಹಾಗೂ ಧಾರ್ಮಿಕ ಕ್ಷೇತ್ರಗಳಾದ ತಿರುಪತಿ, ತಿರುವಣ್ಣಮಲೈ, ಗುರುವಾಯೂರು ಮತ್ತು ಹೈದರಾಬಾದ್(ಗಚಿಬೌಳಿ) ಮೆಟ್ರೋ ಸಿಟಿಯಲ್ಲಿ ಕಾರ್ಯಾಚರಿಸುತ್ತಿದೆ. ಉಡುಪಿಯಲ್ಲಿ ಆರಂಭವಾಗಿರುವ ಕೇಂದ್ರ ಆರನೆಯದ್ದಾಗಿದೆ. ಶೀಘ್ರದಲ್ಲೇ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಮತ್ತು ಇನ್ನಷ್ಟು ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರ ವನ್ನು ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಕೊಂಕಣ ರೈಲ್ವೆ ಪ್ರಾದೇಶಿಕ ಟ್ರಾಫಿಕ್ ಮೆನೇಜರ್ ವಿನಯ್ ಕುಮಾರ್, ಸಾರ್ವಜನಿಕ ಸಂಪರ್ಕ ಮೆನೇಜರ್ ಕೆ.ಸುಧಾ ಕೃಷ್ಣಮೂರ್ತಿ, ಬಿಂದು ರಾಮವತ್, ಸುಧೀಶ್ ರೆಡ್ಡಿ, ಕುನಾಲ್ ವಾಕಡೆ ಮೊದಲಾದವರು ಉಪಸ್ಥಿತರಿದ್ದರು.







