ಸಂಕುಚಿತತೆಯ ‘ಕವಚ’ಗಳಿಂದ ಹೊರಬನ್ನಿ: ಪ್ರೊಅಕ್ಲೂಜಕರ್
ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಉಡುಪಿ, ಜ.4: ಭಾರತದಲ್ಲಿ ಸಂಸ್ಕೃತದ ಸ್ಥಾನ-ಮಾನವನ್ನು ನಿರ್ಧರಿಸ ಬೇಕಾದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು ತಮ್ಮ ಸಂಕುಚಿತತೆಯಿಂದ ತಮ್ಮ ಸುತ್ತಲೂ ‘ಕವಚ’ವನ್ನು ಕಟ್ಟಿಕೊಂಡು ಹೊಸತನಕ್ಕೆ ತೆರೆದುಕೊಳ್ಳುತ್ತಿಲ್ಲ ಎಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿವಿಯ ಪ್ರಾಧ್ಯಾಪಕ ಹಾಗೂ ವಿಶ್ವವಿಖ್ಯಾತ ವಿದ್ವಾಂಸರಾದ ಪ್ರೊ.ಅಶೋಕ್ ಅಕ್ಲೂಜಕರ್ ಹೇಳಿದ್ದಾರೆ.
ಪರ್ಯಾಯ ಶ್ರೀಪಲಿಮಾರು ಮಠ, ಭಾರತೀಯ ವಿದ್ವತ್ ಪರಿಷತ್ ಹಾಗೂ ತತ್ತ್ವ ಸಂಶೋಧನಾ ಸಂಸತ್ ಉಡುಪಿ ಸಂಸ್ಥೆಗಳು, ಹೊಸದಿಲ್ಲಿಯ ಭಾರತೀಯ ದಾರ್ಶನಿಕ ಅನುಸಂಧಾನ ಪರಿಷತ್ ಹಾಗೂ ಹೈದರಾಬಾದ್‌ನ ಇಂಡಿಕ್ ಅಕಾಡೆಮಿಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಆಯೋಜಿಸಲಾದ ‘ನಿಷ್ಪಕ್ಷಪಾತ ಭಾರತೀಯ ಇತಿಹಾಸದ ಮಂಥನ’ (ಡಿಸ್ಪಾಶಿನೇಟ್ ಚರ್ನಿಂಗ್ ಆಫ್ ಇಂಡಾಲಜಿ) ವಿಷಯದಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡುತಿದ್ದರು.
ಪಾಶ್ಚಿಮಾತ್ಯ ವಿದ್ವಾಂಸರು ಭಾರತೀಯ ಶಾಸ್ತ್ರಗಳನ್ನು ತಪ್ಪಾಗಿ ವ್ಯಾಖ್ಯಾನಿಸಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ತಪ್ಪು ಅವರ ಕಡೆಯಿಂದ ಮಾತ್ರ ನಡೆಯುತ್ತಿಲ್ಲ. ನಮ್ಮ ವಿದ್ವಾಂಸರ ತಪ್ಪುಗಳು ಅಷ್ಟೇ ಪ್ರಮಾಣ ದಲ್ಲಿವೆ. ಅವರು ಅಪ್‌ಡೇಟ್ ಆಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಗಂಭೀರ ಓದು ಕಡಿಮೆ ಯಾಗಿದೆ. ಹೀಗಾಗಿ ಇದಕ್ಕೆ ಇನ್ನೊಬ್ಬರನ್ನು ದೂರುತ್ತಾ ಇರುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದರು.
ಭಾರತೀಯ ವಿದ್ವಾಂಸರು ದಾಖಲಿಸಿರುವುದೆಲ್ಲವೂ ಗ್ರಾಹ್ಯ ಎಂಬ ಮನೋಭಾವವನ್ನು ಬಿಟ್ಟು ನಿಷ್ಪಕ್ಷಪಾತವಾಗಿ ವಿಷಯದ ದೃಷ್ಟಿಕೋನದಿಂದ ವಿಮರ್ಶೆ ಮಾಡುವ ಕಲೆಯನ್ನು ನಮ್ಮ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಪ್ರೊ.ಅಶೋಕ್ ತಿಳಿಸಿದರು. ಆರ್ಶೀವಚನ ನೀಡಿ ಮಾತನಾಡಿದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು, ಭಾರತೀಯ ಶಾಸ್ತ್ರದ ಕುರಿತಂತೆ ಅನ್ವೇಷಣೆಗಳು ನಡೆಯಲಿ. ಪ್ರಾಚೀನವಾದುದೆಲ್ಲವೂ ನಿರುಪಯುಕ್ತ, ಆಧುನಿಕ ವಿಜ್ಞಾನ ಉಪಯುಕ್ತ ಎನ್ನುವ ವಾದವನ್ನು ಬಿಟ್ಟು, ಅವುಗಳನ್ನು ವಿಷಯದ ಆಧಾರದಲ್ಲಿ ವಿಮರ್ಶೆ ನಡೆಸಿ ಒಪ್ಪಿಕೊಳ್ಳಬೇಕು. ಭಾರತೀಯ ತತ್ವಶಾಸ್ತ್ರದ ವಿಷಯದಲ್ಲಿರುವ ಭಿನ್ನಮತ ವನ್ನು ಮರೆತು ಪ್ರೀತಿ, ಸಾಮರಸ್ಯ ಹಾಗೂ ಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳ ಬೇಕು ಎಂದರು.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಮೂರು ದಿನಗಳ ಈ ವಿಚಾರಸಂಕಿರಣವನ್ನು ಉದ್ಘಾಟಿಸಿದರು. ಹೊಸದಿಲ್ಲಿಯ ಐಸಿಪಿಆರ್‌ನ ಅಧ್ಯಕ್ಷ ಪ್ರೊ.ಎಸ್.ಆರ್.ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಾಗಪುರ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಅವರ ಸಂಸ್ಕೃತ ಕೃತಿಯೊಂದನ್ನು ಪೇಜಾವರಶ್ರೀಗಳು ಬಿಡುಗಡೆಗೊಳಿಸಿದರು. ಪಲಿಮಾರು ಮಠದ ದಿವಾನರಾದ ವಿದ್ವಾನ್ ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು.
ಭಾರತೀಯ ವಿದ್ವತ್ ಪರಿಷತ್‌ನ ಡಾ.ವೀರನಾರಾಯಣ ಪಾಂಡುರಂಗಿ ಅತಿಥಿಗಳನ್ನು ಸ್ವಾಗತಿಸಿದರೆ, ಉಡುಪಿ ತತ್ವ ಸಂಶೋಧನಾ ಸಂಸತ್ತಿನ ನಿರ್ದೇಶಕ ಡಾ.ವಂಶಿಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಭಾರತೀಯ ವಿದ್ವತ್ ಪರಿಷತ್ತಿನ ನಾಗರಾಜ ಪಟೂರಿ ವಂದಿಸಿದರು.







