2000 ರೂಪಾಯಿ ಮುಖಬೆಲೆಯ ನೋಟು ಮುದ್ರಣಕ್ಕೆ ನಿರ್ಧರಿಸಿಲ್ಲ: ಸರಕಾರದ ಅಧಿಕಾರಿ

ಮುಂಬೈ, ಜ. 4: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಣವನ್ನು ಹಂತಹಂತವಾಗಿ ನಿಲ್ಲಿಸಲಾಗುವುದು ಎಂಬ ವರದಿಯ ನಡುವೆ ಕೇಂದ್ರ ಸರಕಾರ ಶುಕ್ರವಾರ, ವ್ಯವಸ್ಥೆಗೆ ಅಗತ್ಯ ಇರುವುದಕ್ಕಿಂತ ಹೆಚ್ಚಿನ ನೋಟುಗಳನ್ನು ಮುದ್ರಿಸುವ ಯಾವುದೇ ನಿರ್ಧಾರ ಇಲ್ಲ ಎಂದು ಹೇಳಿದೆ.
ಯೋಜಿತ ಅಗತ್ಯತೆಯಂತೆ ನೋಟುಗಳನ್ನು ಮುದ್ರಿಸಲು ಚಿಂತಿಸಲಾಗಿತ್ತು. ಆದರೆ, ಈಗ ಚಲಾವಣೆಯಲ್ಲಿರುವ ನೋಟುಗಳಲ್ಲಿ 35 ಶೇ. 2000 ರೂಪಾಯಿ ಮುಖಬೆಲೆಯದ್ದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ. ‘‘ವ್ಯವಸ್ಥೆಯಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳು ಅಗತ್ಯಕ್ಕಿಂತ ಹೆಚ್ಚಿಗೆ ಇದೆ. 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿ ಸುವ ಬಗ್ಗೆ ಇತ್ತೀಚೆಗೆ ನಿರ್ಧಾರ ತೆಗೆದು ಕೊಂಡಿಲ್ಲ’’ ಎಂದು ಗರ್ಗ್ ಹೇಳಿದ್ದಾರೆ.
2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ ಹಾಗೂ ಇದನ್ನು ಹಂತ ಹಂತವಾಗಿ ನಿಲ್ಲಿಸಲು ಯೋಜಿಸಿದೆ ಎಂದು ಗುರುವಾರ ಕೇಂದ್ರ ಸರಕಾರದ ವರದಿ ಹೇಳಿತ್ತು. 2016 ನವೆಂಬರ್‌ನಲ್ಲಿ ನೋಟು ನಿಷೇಧದ ಬಳಿಕ ಪರಿಚಯಿಸಲಾದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ರಿಸರ್ವ್ ಬ್ಯಾಂಕ್ ಕನಿಷ್ಠಕ್ಕೆ ಇಳಿಕೆ ಮಾಡಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಗುರುವಾರ ಹೇಳಿದ್ದರು.
ರಾತ್ರೋರಾತ್ರಿ ಕೇಂದ್ರ ಸರಕಾರ 1000 ಹಾಗೂ 500 ರೂಪಾಯಿ ಮುಖಬೆಲೆಯ ನೋಟನ್ನು ನಿಷೇಧಿಸಿತ್ತು. ಇದರಿಂದ ಶೇ. 80 ನೋಟುಗಳು ಚಲಾವಣೆ ಕಳೆದುಕೊಂಡವು. ಅನಂತರ ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ಮುಖಬೆಲೆಯ ನೋಟು ಹಾಗೂ 500 ರೂಪಾಯಿ ಮುಖಬೆಲೆಯ ಹೊಸ ನೋಟನ್ನು ಪರಿಚಯಿಸಿತ್ತು.







