ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ದಾಳಿ; ನಾಲ್ವರು ಸೆರೆ
ಬಂಟ್ವಾಳ, ಜ. 4: ಅಕ್ರಮ ಕಸಾಯಿಖಾನೆಯೊಂದಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿ ಸೊತ್ತುಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಕೆದಿಲದ ಉಮರಬ್ಬ ಎಂಬವರ ಮನೆಯ ಹಿಂಭಾಗದಲ್ಲಿ ಶೆಡ್ ನಿರ್ಮಿಸಿ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿಗಳಾದ ಇಸಾಕ್, ಅಸ್ಬಾಲ್, ಮುಹಮ್ಮದ್ ಶಾಕೀರ್, ಶರೀಫ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉಮ್ಮರಬ್ಬ ಎಂಬವರ ಮನೆಯ ಹಿಂದುಗಡೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಠಾಣಾ ಎಸ್ಸೈ ಸೌಮ್ಯಾ ಜಿ. ಅವರ ತಂಡ ಶುಕ್ರವಾರ ದಾಳಿ ನಡೆಸಿದೆ. ಈ ಸಂದರ್ಭ ಮಾಂಸ ತಯಾರಿಯಲ್ಲಿ ತೊಡಗಿದ್ದವರನ್ನು ಮಾಂಸ ಸಹಿತ ವಶಕ್ಕೆ ಪಡೆಯಲಾಗಿದ್ದು, ಈ ವೇಳೆ ಉಮರಬ್ಬ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಸುಮಾರು 50 ಕೆ.ಜಿ.ಯಷ್ಟು ಮಾಂಸ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆ ಮತ್ತು ಸಾಗಾಟಕ್ಕೆ ಉಪಯೋಗಿಸುತ್ತಿದ್ದ 3 ಬೈಕ್‍ಗಳನ್ನು ಸ್ವಾಧೀನಪಡಿಸಿಕೊಂಡು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





