ಮೆಲ್ಕಾರ್ ಮಹಿಳಾ ಕಾಲೇಜ್: ದಶಮಾನೋತ್ಸವದ ಸಮಾರೋಪ ಸಮಾರಂಭ

ಬಂಟ್ವಾಳ, ಜ. 5: ಮಂಗಳೂರು ಎಜುಕೇಶನ್ ಎನ್‍ಹ್ಯಾನ್ಸ್ ಮೆಂಟ್ ಟ್ರಸ್ಟ್ ನಡಿ ಸಜೀಪ ಮುನ್ನೂರಿನ ಮಾರ್ನಬೈಲ್‍ನಲ್ಲಿ ಕಾರ್ಯಾಚರಿಸುತ್ತಿರುವ "ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ದಶಮಾನೋತ್ಸವದ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ ಶನಿವಾರ ಕಾಲೇಜಿನ ವಠಾರದಲ್ಲಿ ನಡೆಯಿತು.
ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ. ಅಬ್ದುಲ್ಲಾ ಕುಂಞಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿಂದುಳಿದ ಪ್ರದೇಶ, ಗ್ರಾಮೀಣ ಮಟ್ಟದಲ್ಲಿ ವಿದ್ಯಾಸಂಸ್ಥೆಯನ್ನು ಮುನ್ನಡೆಸುವುದು ಸುಲಭದ ಕಾರ್ಯವಲ್ಲ. ಆದರೆ, ಎಸ್.ಎಂ. ರಶೀದ್ ಹಾಜಿ ನೇತೃತ್ವದ ಈ ವಿದ್ಯಾಸಂಸ್ಥೆಯು ಸಾಧಿಸಿ ತೋರಿಸಿದೆ. ಗ್ರಾಮೀಣ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ಕಾರ್ಯ ಶ್ಲಾಘನೀಯ ಎಂದ ಅವರು, ಕಡಿಮೆ ಅವಧಿಯಲ್ಲಿ ಈ ವಿದ್ಯಾಸಂಸ್ಥೆಯು ಉತ್ತಮ ಸಾಧನೆ ಮಾಡಿದ್ದು, ಮುಂದಿಯು ಈ ವಿದ್ಯಾಸಂಸ್ಥೆ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಹೆಣ್ಣೊಂದು ಕಲಿತರೆ ಕುಟುಂಬ ಹಾಗೂ ಸಮಾಜ ಕಲಿತಂತೆ ಎಂಬ ಚಿಂತನೆಯಡಿಯಲ್ಲಿ ಗ್ರಾಮೀಣ ಹೆಣ್ಣು ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ಹಾಜಿ ಅವರ ಈ ಕಾರ್ಯ ಅಭಿನಂದನೀಯ ಎಂದರು.
ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು "ದಶಕದಿರು" ಹತ್ತರ ಹೊತ್ತಗೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ಅಕ್ಷರ ಜ್ಞಾನ ಪಡೆದು ಸಮಾಜಕ್ಕೆ ಕೋಡುಗೆ ನೀಡಿದಾಗ ಸಾಮಾಜಿಕ ಬದಲಾವಣೆಯಾಗಲು ಸಾಧ್ಯ. ಗ್ರಾಮೀಣ ಮಟ್ಟದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಕಾಲದ ಬೇಡಿಕೆಯಲ್ಲೊಂದಾಗಿದೆ. ಅಲ್ಲದೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಪೋಷಕರ ಹಕ್ಕು ಮತ್ತು ಶಿಕ್ಷಕರ ಕರ್ತವ್ಯವಾಗಿದೆ ಎಂದು ನುಡಿದರು.
ಸಾಮಾಜಿಕ ನ್ಯಾಯದಲ್ಲಿ ವಂಚಿತರಾಗಿರುವ ಮಹಿಳೆಯರಿಗೆ ಮೌಲ್ಯಯುತ ಶಿಕ್ಷಣ ನೀಡಿದಾಗ ಭದ್ರತೆಯ ಜೀವನ ಸಾಗಿಸಲು ಸಾಧ್ಯ ಎಂದವರು. ಪ್ರಸ್ತುತ ದಿನಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ರ್ಯಾಂಕ್ ಪಡೆದು ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತೋಷದಾಯಕ. ಆದರೆ, ಗಂಡು ಮಕ್ಕಳು ಕ್ಷುಲ್ಲಕ ಕಾರಣಕ್ಕಾಗಿ ಶಾಲೆಯನ್ನು ಅರ್ಧಕ್ಕೆ ಮೊಕಟುಗೊಳಿಸುವುದು ವಿಷಾದನೀಯ ಎಂದರು.
ಮುಸ್ಲಿಂ ಎಜುಕೇಶನ್ ಇನ್‍ಸ್ಟಿಟೂಶನ್ ಫೌಂಡೇಷನ್‍ನ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಮಾತನಾಡಿ, ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಶಿಸ್ತು ಅಗತ್ಯ. ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರ ಶಿಸ್ತು ಪ್ರಶಂಸನೀಯ ಎಂದ ಅವರು, ಸಂಸ್ಥೆ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕಾಲೇಜಿಗೆ ಭೇಟಿ ನೀಡಿ ಮಾತನಾಡಿ, ಗ್ರಾಮೀಣ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ವಿದ್ಯಾಸಂಸ್ಥೆಯ ಮೂಲಕ ಅವಿರತವಾಗಿ ಶ್ರಮಿಸಿರುವ ಎಸ್.ಎಂ. ರಶೀದ್ ಹಾಜಿ ಅವರ ಸಾಮಾಜಿಕ ಕಾರ್ಯ ಅಭಿನಂದನೀಯ. ಸಚಿವನಾಗಿ ಈ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಮಂಗಳೂರು ಎಜುಕೇಶನ್ ಎನ್‍ಹ್ಯಾನ್ಸ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೌತಿಕ ಶಿಕ್ಷಣದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸಕ್ಕೂ ಒತ್ತು ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಬಿ.ಎಡ್ ಪದವಿ ಹಾಗೂ ಶರೀಯತ್ ಕೋರ್ಸ್‍ಗಳನ್ನು ಪ್ರಾರಂಭಿಸಲಾಗು ವುದು ಎಂದ ಅವರು ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕಿದರು.
ವೇದಿಕೆಯಲ್ಲಿ ಅರಕೆರೆ ಮಿತ್ರ ಅಕಾಡೆಮಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಟ್ರಸ್ಟಿಗಳಾದ ಎಚ್.ಖಾಸಿಂ ಅಹ್ಮದ್, ಜೊಹರ್ ಬಾವ, ಮನ್ಸೂರ್ ಅಹ್ಮದ್, ಜಿದ್ದಾ ಮೆಡಿಕಲ್ ಸೆಂಟರ್ ಅಧ್ಯಕ್ಷ ಅಬ್ದುಲ್ಲ ಆರ್ಯಪಾಡಿ, ಸಾದುದ್ದೀನ್ ಎಂ. ಸಾಲಿ, ಬದುರುದ್ದೀನ್ ಡೆಲ್ಟಾ, ಎಚ್.ಎಚ್. ಸಿಮೆಂಟ್ ಪ್ರೊಡೆಕ್ಟ್ ನ ಗಫೂರ್ ಎಚ್.ಎಚ್., ಅಬೂಬಕರ್, ಜಮೀಯ್ಯತುಲ್ ಫಲಾಹ್‍ನ ಇಮ್ತಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಕಾಲೇಜಿ ಪ್ರಾಂಶುಪಾಲ ಅಬ್ದುಲ್ ಲತೀಫ್ ಹಾಗೂ ಶಿಕ್ಷಕ ಅಬ್ದುಲ್ ಮಜೀದ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಸಂಸ್ಥೆಯ ಶಿಕ್ಷಕ, ಶೀಕ್ಷಕೇತರ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳನ್ನು ಗೌರವಿಸಲಾಯಿತು. ದಶಮಾನೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮ ಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಅಬ್ದುಲ್ ಲತೀಫ್ ದಶಮಾನೋತ್ಸವದ ವರದಿ ವಾಚಿಸಿದರು. ಶಿಕ್ಷಕಿ ಅಫ್ರೋಝ ಬಹುಮಾನ ಪಟ್ಟಿ ವಾಚಿಸಿದರು.
ವಿದ್ಯಾರ್ಥಿನಿಯರಾದ ರಂಶೀನಾ ಸ್ವಾಗತಿಸಿ, ಹೀನಾ ಕೌಸರ್ ವಂದಿಸಿದರು. ಶಮೀರಾ ನಿರೂಪಿಸಿದರು. ಶಿಕ್ಷಕರಾದ ಎಂ.ಡಿ. ಮಂಚಿ, ಶಾಹಿದಾ, ಹಮೀದ್ ಸಹಕರಿಸಿದರು.







