84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಎರಡನೇ ದಿನವೂ ಹರಿದು ಬಂದ ಜನಸಾಗರ

ಧಾರವಾಡ, ಜ.5: ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರವೂ ಅಕ್ಷರ ಜಾತ್ರೆಗೆ ಜನಸಾಗರ ಹರಿದು ಬಂತು.
ಸಾಹಿತ್ಯಾಸಕ್ತರು, ಅಕ್ಷರ ಪ್ರೇಮಿಗಳು ದೂರದೂರುಗಳಿಂದ ಧಾರವಾಡಕ್ಕೆ ಆಗಮಿಸಿ ಸಾಹಿತ್ಯದ ಕಂಪನ್ನು ಸವಿದರು. ತಮಗೆ ಇಷ್ಟವಾದ ಪುಸ್ತಕಗಳ ಹುಡುಕಾಟದಲ್ಲಿ ತೊಡಗಿದ್ದ ಸಾರ್ವಜನಿಕರು ಬಿಸಿಲೇರುತ್ತಿದ್ದಂತೆ ಸಭಾಂಗಣದೊಳಗೆ ಸೇರಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಶುಕ್ರವಾರದಷ್ಟು ನೂಕುನುಗ್ಗಲು ಇಲ್ಲದಿದ್ದರೂ ಜನರ ಸಂಖ್ಯೆ ಕಡಿಮೆ ಇರಲಿಲ್ಲ. ಪ್ರಧಾನ ವೇದಿಕೆಯ ಬಳಿ ಬಿಸಿಲ ಝಳಕ್ಕೆ ಧೂಳಿನ ಪ್ರಮಾಣ ಹೆಚ್ಚಾಗಿದ್ದರಿಂದ ಸ್ವಯಂ ಸೇವಕರು ಆಗಾಗ ಅದರ ಮೇಲೆ ನೀರು ಚಿಮುಕಿಸುತ್ತಿದ್ದರು.
ವಾಣಿಜ್ಯ ಮಾರಾಟಕ್ಕೆ ಕೊರತೆ ಇರಲಿಲ್ಲ. ವಿಚಾರಗೋಷ್ಠಿಗಳು ನಡೆಯುತ್ತಿದ್ದ ಸಭಾಂಗಣಕ್ಕಿಂತ ವಾಣಿಜ್ಯ ಮಾರಾಟ ಸ್ಥಳಗಳಲ್ಲೇ ಜನರ ಸಂಖ್ಯೆ ಹೆಚ್ಚಾಗಿ ಕಂಡುಬಂತು. ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಯ ನಡುವಿನ ಅಂತರ ಬಹಳ ದೂರ ಇದ್ದುದರಿಂದ ಸಮಾನಾಂತರ ವೇದಿಕೆಗಳಿಗೆ ಹೋಗಲು ಸಾಹಿತ್ಯಾಸಕ್ತರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ಊಟದ ಸ್ಥಳದಲ್ಲಿ ಇಂದು ಕೂಡ ನೂಕು ನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಸಾರ್ವಜನಿಕರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದುದು ಗಮನ ಸೆಳೆಯಿತು. ನಿನ್ನೆಯಷ್ಟು ಇಂದು ಗಣ್ಯ ವ್ಯಕ್ತಿಗಳ ಆಗಮನ ಇಲ್ಲದ್ದರಿಂದ ಪೊಲೀಸರು ಇಂದು ನಿರಾಳತೆಯಿಂದಿದ್ದರು.
ಬಹುತೇಕ ಎಲ್ಲಾ ಗೋಷ್ಠಿಗಳು ಅರ್ಥಪೂರ್ಣವಾಗಿತ್ತು. ಗೋಷ್ಠಿಗಳಲ್ಲಿ ಸಮ್ಮೇಳನಾಧ್ಯಕ್ಷರು, ಪರಿಷತ್ ಅಧ್ಯಕ್ಷರು ಭಾಗವಹಿಸದಿದ್ದುದರಿಂದ ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರಭುತ್ವ ಮತ್ತು ಅಸಹಿಷ್ಣುತೆ ಕುರಿತ ಗೋಷ್ಠಿಯಲ್ಲಿ ನಟಿ ಹಾಗು ಬಿಜೆಪಿ ಮುಖಂಡೆ ಮಾಳವಿಕಾ ಅವರು ಬಿಜೆಪಿ ಪರವಾಗಿ ಮಾತನಾಡುತ್ತಿದ್ದಂತೆ ಸಭಿಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಮುಂದಿನ ಸಮ್ಮೇಳನದ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆಯುತ್ತಿದ್ದರೂ ಸ್ಪಷ್ಟ ತೀರ್ಮಾನ ನಾಳೆ ಸಂಜೆ ಹೊರಬೀಳಲಿದೆ. ಮಂಗಳೂರು, ಕಾರವಾರ ಅಥವಾ ಬಿಜಾಪುರದಲ್ಲಿ ಸಮ್ಮೇಳನ ನಡೆಯುವ ಸಾಧ್ಯತೆಯ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿದ್ದವು.







