ಕಂಬಾರ ದೇಶಿ ಪ್ರಜ್ಞೆ, ವಸಾಹತೋತ್ತರ ಚಿಂತನೆಯಿಂದ ಮೂಡಿದ ಪ್ರತಿಭೆ: ಪ್ರೊ.ಸಿ.ಎನ್.ರಾಮಚಂದ್ರನ್
ಧಾರವಾಡದಲ್ಲಿ 84ನೇ ಕನ್ನಡ ಸಾಹಿತ್ಯ ಸಮ್ಮೇಳನ

ಧಾರವಾಡ, ಡಿ.5: 84ನೆ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ಚಂದ್ರಶೇಖರ ಕಂಬಾರ ಅವರ ಕಾವ್ಯ, ನಾಟಕ ಹಾಗೂ ಕಾದಂಬರಿಗಳಲ್ಲಿರುವ ಆದರ್ಶ ಸಮಾಜದ ಲಕ್ಷಣಗಳನ್ನು ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ನೆರೆದಿದ್ದ ಸಭಿಕರಿಗೆ ವಿವರಿಸಿದರು.
ಶನಿವಾರ ನಗರದ ಕೃಷಿ ವಿವಿ ಆವರಣದ ಅಭಿಕಾತನಯದತ್ತ ವೇದಿಕೆಯಲ್ಲಿ ಆಯೋಜಿಸಿದ್ದ ಡಾ.ಚಂದ್ರಶೇಖರ ಕಂಬಾರ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಕಂಬಾರರವರ ಒಟ್ಟು ಸಾಹಿತ್ಯವು ದೇಶ ಪ್ರಜ್ಞೆ ಹಾಗೂ ವಸಾಹತೋತ್ತರ ಚಿಂತನೆಗಳಿಂದ ರೂಪಿತಗೊಂಡಿವೆಂದು ತಿಳಿಸಿದರು.
ಅವರು ಮಹಾಮಾಹೆ ನಾಟಕವನ್ನು ರಚಿಸುವ ಮೂಲಕ ರಂಗಭೂಮಿಯಲ್ಲಿ ಭಾಷೆ, ಸಂಸ್ಕೃತಿ ಕುರಿತು ನೋಡುಗರ ಮನಸಿನಲ್ಲಿ ಭಿನ್ನ ರೀತಿಯ ಪ್ರಶ್ನೆಗಳನ್ನು ಮೂಡುವಂತೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಮಾಹಾಮಾಹೆ ನಾಟಕದ ನಂತರ, ಶಿವರಾತ್ರಿ ನಾಟಕವು ಹಲವು ರೀತಿಯಲ್ಲಿ ವಿಶಿಷ್ಟತೆಯಿಂದ ಕೂಡಿರುವಂತಹದ್ದು. ವಚನಗಳ ಕುರಿತು ಹಲವು ಮಂದಿ ಬರಹಗಾರರು ನಾಟಕ, ಕತೆ, ಕಾದಂಬರಿಗಳನ್ನು ಬರೆದಿದ್ದಾರೆ. ಆದರೆ, ನಿರ್ಲಕ್ಷಿತ ಸಮುದಾಯದಿಂದ ಬಂದ ವಚನಕಾರರನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ರೂಪಿಸಿದವರಲ್ಲಿ ಚಂದ್ರಶೇಖರ ಕಂಬಾರ ಮೊದಲಿಗರು. ಹೀಗಾಗಿ ಶಿವರಾತ್ರಿ ನಾಟಕದ ಮೂಲಕ ವಚನ ಚಳವಳಿಯನ್ನು ವಿಭಿನ್ನವಾಗಿ ನೋಡಲು, ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇವತ್ತು ದೇಶದಲ್ಲಿ ಅಹಿಷ್ಣುತೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಕಂಬಾರ ರಚಿಸಿರುವ ಮುಹಮ್ಮದ್ ಘವಾನ ನಾಟಕವನ್ನು ನೋಡಲೆ ಬೇಕು. ಈತ ಪರ್ಷಿಯನ್ ದೇಶದಲ್ಲಿ ರಾಜ್ಯಕ್ಕೆ ಬಂದು ಬೀದರ್ ನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಕತೆಯನ್ನು ಆಧರಿಸಿದೆ. ಬೇರೆ ದೇಶದ ವಿದ್ವಾಂಸನೊಬ್ಬ ನಾಡಿನ ಜನತೆಗಾಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದನ್ನು ಸಹಿಸದ ಮೂಲಭೂತವಾದಿಗಳು ಆತನನ್ನು ಕೊಲೆ ಮಾಡುತ್ತಾರೆ. ಇಂತಹ ಮಾನವೀಯ ವಸ್ತುವಿಷಯಗಳನ್ನು ಆಯ್ಕೆ ಮಾಡಿಕೊಂಡು ಸೃಜನಾತ್ಮಕವಾಗಿ ನಾಟಕವನ್ನಾಗಿಸುವುದು ಕಂಬಾರರಂತಹ ದೇಶಿ ಪ್ರತಿಭೆಯಿಂದ ಮಾತ್ರ ಸಾಧ್ಯವೆಂದು ಅವರು ಹೇಳಿದರು.
ಕೆಲವು ವಿಮರ್ಶಕರು ಕಂಬಾರರ ಎಲ್ಲ ಸಾಹಿತ್ಯದಲ್ಲೂ ಲೈಂಗಿಕತೆ ಎನ್ನುವುದು ಹಾಸುಹೊಕ್ಕಾಗಿದೆ ಎಂದು ಆಪಾದಿಸುತ್ತಾರೆ. ಅವರ ಸಾಹಿತ್ಯದಲ್ಲಿ ಲೈಂಗಿಕತೆ ಇರುವುದು ನಿಜ. ಆದರೆ, ಲೈಂಗಿಕತೆಯನ್ನು ಕಂಬಾರರು ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ಸೃಜನಾತ್ಮಕವಾಗಿ, ಜೀವಂತಿಕೆಯಾಗಿ, ಫಲವಂತಿಕೆಯ ಸಂಪತ್ತನ್ನಾಗಿ ಕಟ್ಟಿಕೊಡುವುದಕ್ಕಾಗಿ ರೂಪಕವಾಗಿ ಬಳಸುತ್ತಾರೆ ಎಂದು ಅವರು ಹೇಳಿದರು.







