ಭಟ್ಕಳ: ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ದೇಶಪಾಂಡೆ

ಭಟ್ಕಳ, ಜ. 5: ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಸಚಿವ ಆರ್.ವಿ.ದೇಶಪಾಂಡೆ ಶನಿವಾರ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ‘ವಿದ್ಯಾರ್ಥಿ ನಿಲಯದ ಉದ್ಘಾಟನೆ ಮಾಡಿ ತೆರಳಿದರೆ ಸಾಲದು ಬದಲಿಗೆ ಅದು ಮುಂದುವರೆಸಿಕೊಂಡು ಹೋಗುವಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಗಮನ ಹರಿಸಬೇಕಾಗಿರುವುದು ಅತೀ ಮುಖ್ಯ. ತಾಲೂಕಿನಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಎಲ್ಲಾ ಅಧಿಕಾರಿಗಳಿಗೂ, ಗುತ್ತಿಗೆದಾರರಿಗೂ ಅಭಿನಂದಿಸಿದರು.
ಶಿಕ್ಷಣ ಕಲಿಕೆಯಲ್ಲಿ ಯಾರೊಬ್ಬರು ವಂಚಿತರಾಗಬಾರದು. ಎಲ್ಲರು ಶಿಕ್ಷಣ ಪಡೆಯಬೇಕು. ಹಿಂದೆಲ್ಲ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲವಾಗಿತ್ತು. ಕಾರಣ ಆಗೆಲ್ಲ ಜನರು ಆರ್ಥಿವಾಗಿ ಸದೃಢರಾಗಿಲ್ಲರಾಗಿದ್ದರು. ಕಾಲ ಬದಲಾದಂತೆ ಜನರು ಶಿಕ್ಷಣ, ವಿದ್ಯೆ ಅವಶ್ಯ ಎಂಬುದು ಅರಿತರು. ಪಾಲಕರು ತಮ್ಮ ಮಕ್ಕಳನ್ನು ದೂರದ ಹಳ್ಳಿಯಿಂದ ನಗರಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ ಮಕ್ಕಳು ಉತ್ತಮ ವಿದ್ಯೆ ಪಡೆದರೆ ಅದು ಪಾಲಕರ ಶ್ರಮಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದ ಅವರು ವಿದ್ಯಾರ್ಥಿ ನಿಲಯದ ಬಗ್ಗೆ ಬಾಲಕಿಯರು ಹಾಗೂ ಪಾಲಕರ ಗಮನವು ಸಹ ಅವಶ್ಯವಾಗಿದೆ. ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯವೂ ಬಹುಮುಖ್ಯ ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿಯೂ ಭಾಗವಹಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ ಮಾತನಾಡಿದ್ದು ‘ ಈ ಹಿಂದಿನ ಸರಕಾರವೂ ಜಿಲ್ಲೆಗೆ 7 ವಿದ್ಯಾರ್ಥಿ ನಿಲಯವನ್ನು ಬಿಡುಗಡೆ ಮಾಡಿದ್ದು ಈ ಪೈಕಿ ಹಿಂದಿನ ಶಾಸಕರ ಹಾಗೂ ಉಸ್ತುವಾರಿ ಸಚಿವರ ಪ್ರಯತ್ನದಿಂದ ತಾಲೂಕಿನಲ್ಲಿ ಸುಸಜ್ಜಿತ ವಿದ್ಯಾರ್ಥಿ ನಿಲಯವಾಗಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಮನೆಯಂತೆ ಹಾಸ್ಟೆಲನಲ್ಲಿ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ಕಟ್ಟಡ ನಿರ್ಮಾಣವಾದ ವ್ಯಾಪ್ತಿಯಲ್ಲಿ ಜನವಸತಿ ವಿರಳವಾಗಿದ್ದು, ಅಧಿಕಾರಿ ಗಳು ಶೀಘ್ರದಲ್ಲಿ ಸಿ.ಸಿಟಿವಿ ಅಳವಡಿಕೆ ಮಾಡುವಂತೆ ಸೂಚಿಸಿದರು. ಹಾಗೂ ಉದ್ಘಾಟನೆಗೊಂಡ ಸಾಕಷ್ಟು ಕಟ್ಟಡಗಳು ನಂತರದ ದಿನದಲ್ಲಿ ನಿರ್ವಹಣೆ ಯಿಲ್ಲದೇ ಹಾಳಾಗುತ್ತದೆ. ಬಹುಶ್ರಮದ ಕಟ್ಟಡ ಇದಾಗಿದ್ದರ ಹಿನ್ನೆಲೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಕಟ್ಟಡ ನಿರ್ಮಾಣದ ಗುತ್ತಿಗೆದಾರರಾದ ಅಬ್ದುಲ್ ಗಣಿ, ಮಾಧವ ಭಟ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಸಚಿವರು, ಜನಪ್ರತಿನಿಧಿಗಳು ವಿದ್ಯಾರ್ಥಿ ನಿಲಯದ ಕೊಠಡಿಯನ್ನು ವಿಕ್ಷಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಸದಸ್ಯ ಮಹಾಬಲೇಶ್ವರ ನಾಯ್ಕ, ವಿಷ್ಣು ದೇವಾಡಿಗ, ಜಯಲಕ್ಷ್ಮೀ ಗೊಂಡ, ಸಹಾಯಕ ಆಯುಕ್ತ ಸಾಜಿದ ಅಹ್ಮದ್ ಮುಲ್ಲಾ ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆ ಅಧಿಕಾರಿ ವಿನಾಯಕ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಹಿಂದುಳಿದ ಇಲಾಖೆ ಅಧಿಕಾರಿ ಬಸವರಾಜ ಎಮ್. ಬಡಿಗೇರ ಸ್ವಾಗತಿಸಿದರು.







