ಯುದ್ಧ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೇನೆಗೆ ಚೀನಾ ಅಧ್ಯಕ್ಷ ಕರೆ

ಶಾಂಘೈ (ಚೀನಾ), ಜ. 5: ತುರ್ತು ಸ್ಥಿತಿಗೆ ಸ್ಪಂದಿಸುವ ತಮ್ಮ ಸಾಮರ್ಥ್ಯವನ್ನು ಚೀನಾದ ಸಶಸ್ತ್ರ ಪಡೆಗಳು ಬಲಪಡಿಸಬೇಕು ಹಾಗೂ ಯುದ್ಧಕ್ಕಾಗಿ ಸಿದ್ಧಗೊಳ್ಳಲು ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ಹೇಳಿದ್ದಾರೆ.
ಸಶಸ್ತ್ರ ಪಡೆಗಳ ಉನ್ನತ ಸೇನಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆಗಳನ್ನು ನೀಡಿದ್ದಾರೆ.
ದಕ್ಷಿಣ ಚೀನಾ ಸಮುದ್ರದ ಒಡೆತನದ ಬಗ್ಗೆ ಹೆಚ್ಚುತ್ತಿರುವ ಬಿಕ್ಕಟ್ಟು ಹಾಗೂ ವ್ಯಾಪಾರ ಮತ್ತು ತೈವಾನ್‌ನ ಸ್ಥಾನಮಾನದ ಬಗ್ಗೆ ಅಮೆರಿಕದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ತನ್ನ ಸಶಸ್ತ್ರ ಪಡೆಗಳನ್ನು ಬಲಗೊಳಿಸಲು ಚೀನಾ ಮುಂದಾಗಿದೆ.
ಚೀನಾ ದಿನೇ ದಿನೇ ಹೊಸ ಹೊಸ ಅಪಾಯಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ ಹಾಗೂ ದೇಶದ ಭದ್ರತೆಯನ್ನು ಖಾತರಿಪಡಿಸಲು ಸಶಸ್ತ್ರ ಪಡೆಗಳು ನಿರಂತರವಾಗಿ ಕೆಲಸ ಮಾಡಬೇಕು ಎಂದು ಸೇನಾಧಿಕಾರಿಗಳ ಜೊತೆ ಮಾತನಾಡುತ್ತಾ ಜಿನ್ ಪಿಂಗ್ ಹೇಳಿದರು ಎಂದು ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಹೊಸ ಕಾಲದ ಸವಾಲುಗಳನ್ನು ಎದುರಿಸಲು ಸಶಸ್ತ್ರ ಪಡೆಗಳು ತಂತ್ರಗಾರಿಕೆಗಳನ್ನು ರೂಪಿಸಬೇಕು ಹಾಗೂ ಯುದ್ಧಕ್ಕಾಗಿ ಸಿದ್ಧಗೊಳ್ಳುವ ಮತ್ತು ಯುದ್ಧ ಮಾಡುವ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಎಂದು ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷರೂ ಆಗಿರುವ ಕ್ಸಿ ಹೇಳಿದರು.







