ಮಂಗಳೂರು ಇಂಡಿಯಾನಾ ಆಸ್ಪತ್ರೆಗೆ ಬಹರೈನ್ ರಾಣಿ ಭೇಟಿ

ಮಂಗಳೂರು, ಜ.5: ನಗರದ ಇಂಡಿಯಾನಾ ಆಸ್ಪತ್ರೆ ಮತ್ತು ಹೃದ್ರೋಗ ಸಂಸ್ಥೆಗೆ ಶುಕ್ರವಾರ ಬಹರೈನ್ ರಾಣಿ ಶೇಖಾ ನೂರಾ ಬಿಂತ್ ಖಲೀಫಾ ಅಲ್ ಖಲೀಫಾ, ಒಮನ್‌ನ ಉನ್ನತ ಅಧಿಕಾರಿಗಳು ಹಾಗೂ ಬಹರೈನ್ ಸಚಿವರ ತಂಡ ಭೇಟಿ ನೀಡಿತು.
ವೈದ್ಯಕೀಯ ಪ್ರವಾಸೋದ್ಯಮದ ಅಂಗವಾಗಿ ಭೇಟಿ ನೀಡಿದ ಉನ್ನತ ಮಟ್ಟದ ನಿಯೋಗದಲ್ಲಿ ಬಹರೈನ್‌ನ ಉನ್ನತಾಧಿಕಾರಿಗಳ ಜತೆಗೆ ಆರೋಗ್ಯ ಸಚಿವರು, ರಕ್ಷಣಾ ಸಚಿವರು ಮತ್ತು ಕಾರ್ಮಿಕ ಸಚಿವರಿದ್ದರು. ಬಹರೈನ್ ಮತ್ತು ಒಮನ್‌ನ ನಾಗರಿಕರ ಆರೋಗ್ಯ ಸೇವೆಗಾಗಿ ಇಂಡಿಯಾನಾ ಆಸ್ಪತ್ರೆಯ ನೆರವು ಪಡೆಯುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಇಂಡಿಯಾನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಅಧ್ಯಕ್ಷ ಡಾ.ಅಲಿ ಕುಂಬ್ಳೆ ಮತ್ತು ಉಪಾಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಸೇರಿದಂತೆ ಆಡಳಿತ ಮಂಡಳಿ ಸದಸ್ಯರ ಜತೆಗೆ ಚರ್ಚೆ ನಡೆಸಿದರು.
ಸರಕಾರಿ ಪ್ರಾಯೋಜಿತ ರೋಗಿಗಳಿಗೆ ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ಪಟ್ಟಿಯಲ್ಲಿ ಸೇರಿಸುವ ವಿಧಿವಿಧಾನಗಳನ್ನು ಅಂತಿಮಪಡಿಸಲು ಬಹರೈನ್ನ ಆರೋಗ್ಯ ಸಚಿವಾಲಯದ ಉನ್ನತಾಧಿಕಾರಿಗಳ ತಂಡವನ್ನು ಕಳುಹಿಸಿಕೊಡುವುದಾಗಿ ಬಹರೈನ್ ರಾಣಿ ಭರವಸೆ ನೀಡಿದರು.
ಬದ್ರಾ ಸಮಾ ಆಸ್ಪತ್ರೆ ಸಮೂಹದ ಆಡಳಿತ ನಿರ್ದೇಶಕರೂ, ಒಮನ್ ಮತ್ತು ಬಹರೈನ್ನ ಖ್ಯಾತ ಉದ್ಯಮಿ ಆದ ಅಬ್ದುಲ್ ಲತೀಫ್ ಉಪ್ಪಳ ಅವರು ರಾಣಿ ನೇತೃತ್ವದ ನಿಯೋಗವನ್ನು ಇಂಡಿಯಾನಾ ಆಸ್ಪತ್ರೆಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬದ್ರಾ ಸಮಾ ಎ1 ಹಿಲಾಲ್ ಆಸ್ಪತ್ರೆ ಜಾಲವು ಇಂಡಿಯಾನಾ ಆಸ್ಪತ್ರೆಯ ವೈದ್ಯಕೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವು ನೀಡುತ್ತಿದೆ. ಬದ್ರಾ ಸಮಾ ಆಸ್ಪತ್ರೆಯ ಸಿಇಒ ಡಾ. ಶಫೀಕ್ ಕೂಡಾ ಚರ್ಚೆಯಲ್ಲಿ ಭಾಗವಹಿಸಿದ್ದರು.
ಇದು ಇಂಡಿಯಾನಾ ಆಸ್ಪತ್ರೆ ಮತ್ತು ಮಂಗಳೂರಿನ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಮೈಲುಗಲ್ಲು ಎಂದು ಡಾ. ಯೂಸಫ್ ಕುಂಬ್ಳೆ ಬಣ್ಣಿಸಿದ್ದಾರೆ. ಚೆನ್ನೈ, ಬೆಂಗಳೂರು, ದಿಲ್ಲಿ, ಮುಂಬೈನಂಥ ನಗರಗಳು ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ದೇಶಗಳು ಸೇರಿದಂತೆ ವಿವಿಧೆಡೆಯಿಂದ ರೋಗಿಗಳನ್ನು ಆಕರ್ಷಿಸುತ್ತಿವೆ.
ಸ್ಮಾರ್ಟ್ ಸಿಟಿಯಾಗಿರುವ ಮಂಗಳೂರನ್ನು ಕೂಡ ವೈದ್ಯಕೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸಲು ಜಿಲ್ಲಾಡಳಿತ, ಮಾಧ್ಯಮ, ಹೊಟೇಲ್ ಮಾಲಕರು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ಡಾ.ಯೂಸಫ್ ಸಲಹೆ ಮಾಡಿದರು.
ಇಂಡಿಯಾನಾ ಆಸ್ಪತ್ರೆ ವೈದ್ಯಕೀಯ ಪ್ರವಾಸಿ ರೋಗಿಗಳಿಗೆ, ಆಂಜಿಯೊಪ್ಲಾಸ್ಟಿ, ಬೈಪಾಸ್ ಶಸ್ತ್ರಚಿಕಿತ್ಸೆ, ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ, ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯಂಥ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು, ಇದರ ಜತೆಗೆ ಎರಡನೇ ಹಂತದ ಆರೈಕೆ ಸೇವೆಯನ್ನು ಒದಗಿಸಲಿದೆ ಎಂದು ವಿವರಿಸಿದರು.
ಇಂಡಿಯಾನಾ ಆಸ್ಪತ್ರೆ ದೇಶದ ಅತ್ಯಾಧುನಿಕ ಹಾಗೂ ವಿಶ್ವಾಸಾರ್ಹ ಜಾಗತಿಕ ಆರೋಗ್ಯ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಬಹರೇನ್ ರಾಣಿ ಬಣ್ಣಿಸಿದರು.







