ಪ್ರಥಮ ಬಾರಿ ಬಂಟ್ವಾಳಕ್ಕೆ ಭೇಟಿ ನೀಡಿದ ರಾಜ್ಯಪಾಲ ವಜೂಭಾಯಿ

ಬಂಟ್ವಾಳ, ಜ. 5: ಘಟಾನುಘಟಿ ರಾಜಕೀಯ ನೇತಾರರ ಆಗಮನಕ್ಕೆ ಸಾಕ್ಷಿಯಾಗಿದ್ದ ಬಂಟ್ವಾಳಕ್ಕೆ ಸಾಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯಪಾಲರು ಇದುವರಗೆ ಆಗಮಿಸಿರಲಿಲ್ಲ. ಈಗಿನ ರಾಜ್ಯಪಾಲರಾದ ವಜೂಭಾಯಿ ರೂಢಬಾಯಿವಾಲ ಅವರು ಬಂಟ್ವಾಳದಂತಹ ಪುಟ್ಟ ನಗರಕ್ಕೆ ಇಂದು ಭೇಟಿ ನೀಡಿದ್ದಾರೆ.
ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿದ ಬಳಿಕ ನಿರ್ಮಿಸಿರುವ ಶಾಲಾ ಕಟ್ಟಡದ ಮೇಲಂತಸ್ತಿನ ಕೊಠಡಿಗಳ ಲೋಕಾರ್ಪಣೆಗಾಗಿ ಶನಿವಾರ ಕರ್ನಾಟಕದ ರಾಜ್ಯಪಾಲರು ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ನೇರ ರಸ್ತೆಯ ಮೂಲಕ ಆಗಮಿಸಿದ ರಾಜ್ಯಪಾಲರಿಗೆ, ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಸಾಂಪ್ರದಾಯಿಕವಾಗಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ಕಾರ್ಯಕ್ರಮ ಮುಗಿದ ಬಳಿಕವು ಮತ್ತೆ ಬಂಟ್ವಾಳ ಪ್ರವಾಸಿಮಂದಿರಕ್ಕೆ ಅಗಮಿಸಿ ಒಂದಷ್ಟು ಹೊತ್ತು ವಿಶ್ರಾಂತಿ ಪಡೆದು ವಾಪಸು ವಿಮಾನ ನಿಲ್ದಾಣದತ್ತ ಪ್ರಯಾಣಿಸಿದರು. ರಾಜ್ಯಪಾಲರೊಬ್ಬರ ಅಗಮನದ ಹಿನ್ನಲೆಯಲ್ಲಿ ಬಂಟ್ವಾಳ ಸಹಿತ ಮೂಡನಡುಗೋಡು ಪರಿಸರದಲ್ಲಿ ಸಂಭ್ರಮ ಮನೆ ಮಾಡಿತ್ತು. ರಾಜ್ಯಪಾಲರನ್ನು ಹತ್ತಿರದಿಂದ ಕಂಡ ದಡ್ಡಲಕಾಡು ಶಾಲಾ ಮಕ್ಕಳು ಟಾಟಾ ಮಾಡಿಕೊಂಡು ಬೀಳ್ಕೊಟ್ಟು ಖುಷಿಪಟ್ಟರು.
ತಾಲೂಕಾಡಳಿತದ ವತಿಯಿಂದ ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಎಎಸ್ಪಿ ಸೈದುಲ್ ಅಡಾವತ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮೊದಲಾದವರು ರಾಜ್ಯಪಾಲ ವಜೂಬಾಯಿವಾಲ ಅವರನ್ನು ಶಾಲಾ ವಠಾರದಲ್ಲಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ಮಧ್ಯಾಹ್ನ 3ಗಂಟೆಗೆ ಶಾಲಾ ಅವರಣಕ್ಕೆ ತಲುಪಿದ್ದ ರಾಜ್ಯಪಾಲರು ಸುಮಾರು 25 ನಿಮಿಷಗಳ ಕಾಲ ಹಿಂದಿಯಲ್ಲಿ ಭಾಷಣ ಮಾಡಿದರು. ರಾಜ್ಯಪಾಲರ ಅಗಮನದ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.







