ಬಾಲ್ಯ ವಿವಾಹ ತಡೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ

ಚಿಕ್ಕಮಗಳೂರು, ಜ.5: ಬಾಲ್ಯ ವಿವಾಹವು ಒಂದು ಅನಿಷ್ಠ ಪದ್ದತಿಯಾಗಿದ್ದು, ಇದರ ನಿರ್ಮೂಲನೆಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದರೊಂದಿಗೆ ಸಮಾಜದಿಂದ ಸಂಪೂರ್ಣವಾಗಿ ತೊಡೆದು ಹಾಕಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯ ವಿವಾಹವು ಸಮಾಜದಲ್ಲಿನ ಒಂದು ಅನಿಷ್ಠ ಪದ್ಧತಿಯಾಗಿದ್ದು, ಇದನ್ನು ಹೋಗಲಾಡಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಬಾಲ್ಯ ವಿವಾಹದಿಂದ ಸಾಮಾಜಿಕ ತೊಂದರೆಗಳ ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಇಂತಹ ವಿವಾಹಗಳು ಸಾಮಾನ್ಯವಾಗಿ ಅನಕ್ಷರಸ್ಥರು, ಆರ್ಥಿಕವಾಗಿ ದುರ್ಬಲರಾಗಿರುವರು ವಾಸಿಸುವ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಜನಸಾಮಾನ್ಯರಲ್ಲಿ ಇದರಿಂದಾಗುವ ದುಷ್ಪರಿಣಾಮ ಹಾಗೂ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, 21 ವರ್ಷದೊಳಗಿನ ಯುವಕ ಹಾಗೂ 18 ವರ್ಷದೊಳಗಿನ ಯುವತಿಯರ ನಡುವೆ ನಡೆಯುವ ವಿವಾಹವು ಶೂನ್ಯವಾಗಿದ್ದು, ಶಿಕ್ಷಾರ್ಹ ಅಪರಾಧವಾಗುತ್ತದೆ. ಇದಕ್ಕೆ ಪ್ರೋತ್ಸಾಹಿಸುವ ಯಾವುದೇ ವ್ಯಕ್ತಿ ಸಂಸ್ಥೆ ಪೋಷಕರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ಒಂದು ವರ್ಷದಲ್ಲಿ ಬಾಲ್ಯ ವಿವಾಹದ ಬಗ್ಗೆ 18 ಪ್ರಕರಣಗಳು ಬಂದಿದ್ದು, ಅವುಗಳಲ್ಲಿ 12 ಪ್ರಕರಣಗಳು ತಡೆಗಟ್ಟಲಾಗಿದ್ದು, 2 ಪ್ರಕರಣಗಳಲ್ಲಿ ಪೋಷಕರ ವಿರುದ್ಧ ದೂರನ್ನು ದಾಖಲಿಸಿವುದರೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಬಾಲ್ಯ ವಿವಾಹವಾಗುತ್ತಿರುವ ಬಗ್ಗೆ ಮಾಹಿತಿಗಳು ಬಂದಂತಹ ಸಂದರ್ಭದಲ್ಲಿ ವಿವಾಹವನ್ನು ತಡೆಗಟ್ಟುವುದರ ಜೊತೆಗೆ ಅವುಗಳನ್ನು ಪ್ರೊತ್ಸಾಹಿಸುವ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಅಶಾ ಕಾರ್ಯಕರ್ತರ ಮೂಲಕ ಹಾಗೂ ಬೀದಿನಾಟಕಗಳು, ಗೋಡೆಬರಹಗಳ ಮೂಲಕ ಮಾಡಬೇಕು ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಸಿ.ಬಸವರಾಜಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನಪ್ಪ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.







