ರಫೇಲ್ ಒಪ್ಪಂದ: ಪಾರಿಕ್ಕರ್‌ಗೆ ಹೆಚ್ಚುವರಿ ಭದ್ರತೆ ನೀಡಲು ಕಾಂಗ್ರೆಸ್ ನಿಂದ ರಾಷ್ಟ್ರಪತಿಗೆ ಪತ್ರ
ಪಣಜಿ, ಜ. 5: ರಫೇಲ್ ಯುದ್ಧ ವಿಮಾನ ಒಪ್ಪಂದದ ಭ್ರಷ್ಟಾಚಾರದ ಬಗ್ಗೆ ತಿಳಿದಿರುವ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರಿಗೆ ಹೆಚ್ಚುವರಿ ಭದ್ರತೆಗೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಗೋವಾ ಕಾಂಗ್ರೆಸ್ ಸಮಿತಿ ಶನಿವಾರ ಹೇಳಿದೆ.
‘‘ರಫೇಲ್ ಯುದ್ಧ ವಿಮಾನ ಒಪ್ಪಂದದ ಫೈಲ್‌ಗಳು ಅವರ ಬೆಡ್ ರೂಂ’’ನಲ್ಲಿ ಇರುವುದರಿಂದ ಮಾಜಿ ರಕ್ಷಣಾ ಸಚಿವ ಹಾಗೂ ಬಿಜೆಪಿಯ ನಾಯಕರಾಗಿರುವ ಮನೋಹರ್ ಪಾರಿಕ್ಕರ್‌ಗೆ ಭದ್ರತೆ ಹೆಚ್ಚಿಸುವ ಅಗತ್ಯತೆ ಇದೆ ಎಂದು ಕಾಂಗ್ರೆಸ್ ಹೇಳಿದೆ.
ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಕಾಂಗ್ರೆಸ್ ಮಂಗಳವಾರ ಆಡಿಯೊ ಬಿಡುಗಡೆ ಮಾಡಿತ್ತು. ಈ ಆಡಿಯೊದಲ್ಲಿ ಭಾರತ-ಫ್ರಾನ್ಸ್ ನಡುವಿನ ರಫೇಲ್ ಜೆಟ್ ಖರೀದಿ ಒಪ್ಪಂದದ ಬಗೆಗಿನ ಎಲ್ಲ ವಿವರಗಳು ಮನೋಹರ್ ಪಾರಿಕ್ಕಾರ್ ಅವರಿಗೆ ತಿಳಿದಿದೆ ಎಂದು ಗೋವಾ ಸಚಿವ ವಿಶ್ವಜೀತ್ ರಾಣೆ ಹೇಳಿರುವುದು ದಾಖಲಾಗಿದೆ.
ಆದರೆ, ಇದು ತಿರುಚಿದ ಆಡಿಯೊ ಎಂದು ರಾಣೆ ಹಾಗೂ ಪಾರಿಕ್ಕರ್ ಪ್ರತಿಪಾದಿಸಿದ್ದರು. ಅನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಹಿತಿ ಹೊಂದಿರುವ ಪಾರಿಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್, ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತ ಕಡತಗಳು ಮನೋಹರ್ ಪಾರಿಕ್ಕರ್ ಅವರಲ್ಲಿ ಇದೆ. ಇದು ಬೆಳಕಿಗೆ ಬಂದರೆ ಒಪ್ಪಂದದಲ್ಲಿ ನಡೆದ ಭ್ರಷ್ಟಾಚಾರ ಬಹಿರಂಗವಾಗ ಬಹುದು. ಈ ಹಿನ್ನೆಲೆಯಲ್ಲಿ ಪಾರಿಕ್ಕರ್ ಅವರ ಜೀವಕ್ಕೆ ಅಪಾಯ ಇದೆ ಎಂದು ಹೇಳಿದೆ.
ಯುದ್ಧ ವಿಮಾನ ಉತ್ಪಾದಕರಾದ ಡಸಾಲ್ಟ್ ಏವಿಯೇಶನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ಮೊದಲು ಅನಿಲ್ ಅಂಬಾನಿ ಅವರ ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್‌ಗೆ ನೆರವು ನೀಡಲು ಹೆಚ್ಚಿನ ಬೆಲೆಯ ರಫೇಲ್ ಒಪ್ಪಂದಕ್ಕೆ ಕೇಂದ್ರ ಸರಕಾರ ಸಹಿ ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.