ಪೌರತ್ವ ಮಸೂದೆ ಬಗ್ಗೆ ಮೋದಿ ಹೇಳಿಕೆ: ಅಸ್ಸಾಂನಲ್ಲಿ ಭಾರೀ ಪ್ರತಿಭಟನೆ
ಪ್ರಧಾನಿಯ ಪ್ರತಿಕೃತಿ ದಹನ

ಸಿಲ್ಚರ್, ಜ.5: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಪಕ್ಷದ ಅಭಿಯಾನವನ್ನು ಶುಕ್ರವಾರ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವಿವಾದಕ್ಕೂ ನಾಂದಿ ಹಾಡಿದ್ದಾರೆ.
ವಿವಾದಿತ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಜಾರಿ ಮಾಡುತ್ತೇವೆ ಎಂದು ಪ್ರಧಾನಿ ನೀಡಿರುವ ಹೇಳಿಕೆಗೆ ಅಸ್ಸಾಂನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಸ್ಸಾಂನ ಸಿಲ್ಚರ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ನೆರೆರಾಷ್ಟ್ರಗಳ ಹಿಂದುಗಳಿಗೆ ಪೌರತ್ವ ಒಂದು ಭಾವನಾತ್ಮಕ ವಿಷಯವಾಗಿದೆ. ಆದರೆ ತನ್ನ ಸರಕಾರ, ಅಸ್ಸಾಂನ ಸ್ಥಳೀಯ ಜನರ ಸಾಮಾಜಿಕ ರಾಜಕೀಯ ಹಕ್ಕುಗಳು ಮತ್ತು ಸಂಸ್ಕೃತಿಯ ಹಿತರಕ್ಷಣೆಯನ್ನು ಪ್ರತಿಪಾದಿಸುವ ಅಸ್ಸಾಂ ಒಪ್ಪಂದದ ವಿಧಿ 6ನ್ನು ಅನುಷ್ಠಾನಕ್ಕೆ ತರಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಅಸ್ಸಾಂನ ಸ್ಥಳೀಯ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಪ್ರಧಾನಿಯ ರ್ಯಾಲಿಯ ನಂತರ ಅಸ್ಸಾಂನಲ್ಲಿ ಪ್ರತಿಭಟನೆಗಳು ಆರಂಭವಾಗಿ ದಿಬ್ರುಗಡ್ ಹಾಗೂ ಇತರ ಪ್ರದೇಶಗಳಲ್ಲಿ ಪ್ರಧಾನಿಯ ಪ್ರತಿಕೃತಿ ದಹಿಸಲಾಯಿತು.
ರಾಜ್ಯದ ಹಿತಾಸಕ್ತಿಯನ್ನು ಕಾಯುವುದಾಗಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಜನರಿಗೆ ಭರವಸೆ ನೀಡಿದರೂ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರು ಭಾರತದಲ್ಲಿ ನೆಲೆಸಿ ಆರು ವರ್ಷಗಳ ನಂತರ ಅವರಿಗೆ ಪೌರತ್ವ ನೀಡುವ ಅವಕಾಶವನ್ನು ನೀಡಲಾಗಿದೆ.







