ವಿಷ ಪ್ರಸಾದ ದುರಂತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್

ಹನೂರು,ಜ.5: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದ ವಿಷ ಪ್ರಸಾದ ದುರಂತ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಘಟನೆಗಳು ಎಲ್ಲಿಯೂ ಸಹ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮ ಕೈಗೂಳ್ಳಲಾಗುವುದು ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ತಿಳಿಸಿದರು.
ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಅವರು ಮಾತನಾಡಿದ ಅವರು, ವಿಷಪ್ರಸಾದ ಸೇವನೆ ಪ್ರಕರಣ ರಾಜ್ಯದಲ್ಲಿಯೇ ನಡೆದ ಭೀಕರ ದುರ್ಘಟನೆಯಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾದವರನ್ನು ಈಗಾಗಲೇ ಬಂಧಿಸಲಾಗಿದೆ. ಘಟನೆಯ ಹಿನ್ನೆಲೆ ದೇವಾಲಯವನ್ನು ಮುಜರಾಯಿ ಇಲಾಖಾ ವ್ಯಾಪಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಟ್ರಸ್ಟಿನ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳೋಡನೆ ಚರ್ಚಿಸಿ ಇಲ್ಲಿಗೆ ಆಗಮಿಸಿದ್ದೇನೆ. ಈ ದೇವಾಲಯವನ್ನು ಮುಜರಾಯಿ ಇಲಾಖಾ ವ್ಯಾಪ್ತಿಗೆ ಸೇರ್ಪಡೆಗೊಳಿಸಿಕೊಳ್ಳಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಹ ಉತ್ಸುಕರಾಗಿದ್ದು, ಅತಿ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಬೀಗಮುದ್ರೆ ಹಾಕಿ: ದೇವಸ್ಥಾನದ ಸ್ಥಳ ಪರಿಶೀಲನೆ ನಡೆಸಿ ದೇವಾಲಯದ ಹಾಲಿ ಇರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ದೇವಾಲಯದ ಮುಖ್ಯದ್ವಾರ ಮತ್ತು ಹುಂಡಿಯನ್ನು ವಶಕ್ಕೆ ಪಡೆದುಕೊಂಡಿರದಿದ್ದನ್ನು ಗಮನಿಸಿ, ಈ ಕೂಡಲೇ ಹುಂಡಿ ಮತ್ತು ಮುಖ್ಯದ್ವಾರಕ್ಕೆ ಬೀಗಮುದ್ರೆ ಹಾಕಿ ದೇವಾಲಯವನ್ನು ವಶಕ್ಕೆ ಪಡೆಯುವಂತೆ ಸ್ಥಳದಲ್ಲೇ ಹಾಜರಿದ್ದ ಉಪವಿಭಾಗಾಧಿಕಾರಿ ಫೌಜಿಯಾ ತರುನ್ನಮ್‍ಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಸಾವಿರಾರು ದೇವಾಲಯಗಳು ಟ್ರಸ್ಟಿಗಳ ಆಡಳಿತದಲ್ಲಿ ನಡೆಯುತ್ತಿದ್ದು, ಇವುಗಳನ್ನು ವಶಕ್ಕೆ ಪಡೆಯಲು ಸರ್ಕಾರ ಕ್ರಮಕೈಗೊಳ್ಳಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ದುರ್ಘಟನೆ ನಡೆದಿರುವುದು ಈ ದೇವಾಲಯದಲ್ಲಿ ಮಾತ್ರ. ಈ ಹಿನ್ನೆಲೆ ಅತಿಶೀಘ್ರದಲ್ಲಿ ಈ ದೇವಾಲಯವನ್ನು ವಶಕ್ಕೆ ಪಡೆಯಲಾಗುವುದು. ಉಳಿದಂತೆ ಇನ್ನಿತರ ದೇವಾಲಯಗಳಲ್ಲಿ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೃತ ಕುಟಂಬಗಳಿಗೆ ಸಾಂತ್ವನ: ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ಸಾವನ್ನಪ್ಪಿದ್ದ ಸುಳ್ವಾಡಿ ಗ್ರಾಮದ ನಾಗೇಶ್ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಕೋಟೆಪೋದೆ ಗ್ರಾಮದ ಕೃಷ್ಣ ನಾಯಕ ಹಾಗೂ ಮೈಲಿ ಬಾಯಿ ಕುಟುಂಬದ ಪುತ್ರಿಯರನ್ನು ಭೇಟಿ ಮಾಡಿ ರಾಜ್ಯ ಲಂಬಾಣಿ ತಾಂಡ ನಿಗಮದ ವತಿಯಿಂದ 1 ಲಕ್ಷ ಪರಿಹಾರವನ್ನು ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ನರೇಂದ್ರ, ಜಿ.ಪಂ ಅಧ್ಯಕ್ಷೆ ಶಿವಮ್ಮಕೃಷ್ಣ, ಸದಸ್ಯರಾದ ಬಸವರಾಜು, ಲೇಖಾ, ಮರಗದಮಣಿ, ಅಪರ ಜಿಲ್ಲಾಧಿಕಾರಿ ಆನಂದ್, ಜಿ.ಪಂ ಸಿಇಓ ಹರೀಶ್‍ಕುಮಾರ್, ತಹಸೀಲ್ದಾರ್ ರಾಯಪ್ಪ ಹುಣಸಗಿ, ತಾಲೂಕು ಪಂ. ಅಧ್ಯಕ್ಷ ರಾಜೇಂದ್ರ ಇನ್ನಿತರರಿದ್ದರು.







