ಪಕ್ಷ ಸಂಘಟಿಸುವ ಶಕ್ತಿ ಇರುವುದು ಕಾರ್ಯಕರ್ತರಿಗೆ ಮಾತ್ರ: ಮಾಜಿ ಸಚಿವೆ ರಾಣಿಸತೀಶ್
ಮೈಸೂರಿನಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನೆ ಕಾರ್ಯಕ್ರಮ

ಮೈಸೂರು,ಜ.5: ಪಕ್ಷ ಸಂಘಟಿಸುವ ಶಕ್ತಿ ಇರುವುದು ಕಾರ್ಯಕರ್ತರಿಗೆ, ಕಾರ್ಯಕರ್ತರಿದ್ದರೆ ಮಾತ್ರ ನಾಯಕರು ಎಂದು ಮಾಜಿ ಸಚಿವೆ ರಾಣಿಸತೀಶ್ ಅಭಿಪ್ರಾಯಿಸಿದರು.
ನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ನೂತನ ಕಾಂಗ್ರೆಸ್ ಭವನದಲ್ಲಿ ಶನಿವಾರ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ಹಾಗೂ ಜಿಲ್ಲಾ ಸೇವಾದಳದ ಕಾರ್ಯಕಾರಿಣಿ ಸಭೆ ಮತ್ತು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ನಿಂತಿರುವುದು ಕಾರ್ಯಕರ್ತರಿಂದ. ಅವರಿದ್ದರೆ ನಾವು. ಕಾರ್ಯಕರ್ತರ ಪರಿಶ್ರಮದಿಂದ ನಾವು ನಾಯಕರಾಗುವುದು. ಪಕ್ಷವನ್ನು ಸಂಘಟಿಸುವ ಶಕ್ತಿ ಕಾರ್ಯಕರ್ತರಿಗೆ ಮಾತ್ರ ಇರುವುದು ಎಂದು ಹೇಳಿದರು.
ಪಕ್ಷದ ಸಂಘಟನೆಗಾಗಿ ಬಹಳಷ್ಟು ಮಹನೀಯರು ಸೇವೆಸಲ್ಲಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಮಹಮದ್ ಅಲಿ, ನೆಹರು, ಅನಿಬೆಸಂಟ್ ಸೇರಿದಂತೆ ಹಲವರಿದ್ದಾರೆ. ಅವರ ಮಾರ್ಗದಲ್ಲಿ ಇಂದಿನ ನಾಯಕರು ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಕರ್ತರಿಗೆ, ಸಮಾಜಕ್ಕೆ ಏನಾಗಬೇಕೆಂಬ ಕಾಳಜಿ ನಾಯಕರಿಗೆ ಇರಬೇಕು. ಆಗ ಮಾತ್ರ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅಧಿಕಾರ ಹೋಗುತ್ತದೆ, ಬರುತ್ತದೆ. ಅದಕ್ಕೆ ತಲೆಕಡಿಸಿಕೊಳ್ಳಬಾರು. ಅಧಿಕಾರ ಇರಲಿ ಬಿಡಲಿ, ಸದಾಕಾಲ ಕಾರ್ಯಕರ್ತರು ಮತ್ತು ಸಮಾಜದೊಡೆನೆ ಇರುವವರು ನಿಜವಾದ ನಾಯಕರಾಗುತ್ತಾರೆ ಎಂದರು.
ಡಾ.ಪುಷ್ಪ ಅಮರನಾಥ್ ಅವರಿಗೆ ಅಧಿಕಾರ ಸಿಕ್ಕಿಲ್ಲ. ಇದೊಂದ ಅವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಜ್ಯದ ಮೂಲೆ ಮೂಲೆಗೆ ಹೋಗಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಕಾರ್ಯಕರ್ತರಿಗೆ ತಿಳಿಸಬೇಕಾಗಿದ ಎಂದು ಹೇಳಿದರು.
ಕಾಂಗ್ರೆಸ್ ಸೋಲಿಗೆ ಆತ್ಮಾವನಲೋಕನ ಮಾಡಿಕೊಳ್ಳಬೇಕಿದೆ: ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದರು. ಯಶಸ್ವಿನಿ, ಮನಸ್ವಿನಿ, ಮೈತ್ರಿ, ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾದರು. ಆದರೆ ಅದನ್ನು ಸಾಮನ್ಯ ಜನರಿಗೆ ತಲುಪಿಸುವಲ್ಲಿ ನಾಯಕರುಗಳು ಮತ್ತು ಕಾರ್ಯಕರ್ತರು ವಿಫಲರಾದ ಪರಿಣಾಮ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಯಿತು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ನಮಗಿದೆ ಎಂದು ರಾಣಿ ಸತೀಶ್ ಹೇಳಿದರು.
ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಬರುತ್ತವೆ. ಅದನ್ನೆಲ್ಲ ಸಹಿಸಿಕೊಂಡು ಮುನ್ನುಗ್ಗಬೇಕಿದೆ. ರಾಜಕಾರಣಿಗಳಿಗೆ ಒಳ್ಳೆಯ ಸ್ಥಾನ ಮತ್ತು ಗೌರವ ಇರದ ಸ್ಥಿತಿ ನಿರ್ಮಾಣವಾಗಿದೆ. ನಾಯಕ ಎಲ್ಲಿ ತಪ್ಪು ಮಾಡುತ್ತಾನೋ ಅಲ್ಲಿ ಕಾರ್ಯಕರ್ತರು ಎಚ್ಚರಿಸಿ ತಿದ್ದಿ ತೀಡಿ ಮುನ್ನಡೆಸಬೇಕು ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಇದೇ ವೇಳೆ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಿಗೆ ಮೈಸೂರು ಪೇಟ, ರೇಷ್ಮೆ ಹಾರ, ಶಾಲು ಹೊಸಿ ಫಲತಾಂಬೂಲ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕ ಮಂಜುನಾಥ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿ.ಪಂ.ಸದಸ್ಯೆ ನಂದಿನಿ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಮುನಿಯಪ್ಪ, ಸುನೀಲ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.







