ಮೀನುಗಾರರ ಪತ್ತೆಗೆ ಆಗ್ರಹ: ಮಲ್ಪೆಯಿಂದ ಉಡುಪಿಗೆ ಮೀನುಗಾರರ ಬೃಹತ್ ಮೆರವಣಿಗೆ ಆರಂಭ

ಉಡುಪಿ, ಜ.6: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ಬೋಟ್ ಹಾಗೂ ಏಳು ಮೀನುಗಾರರ ಶೀಘ್ರ ಪತ್ತೆಗೆ ಆಗ್ರಹಿಸಿ ಮೀನುಗಾರರ ಬೃಹತ್ ಧರಣಿ ಮೆರವಣಿಗೆ ಇಂದು ಬೆಳಗ್ಗೆ ಮಲ್ಪೆಯಿಂದ ಆರಂಭಗೊಂಡಿದೆ.
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಮಲ್ಪೆ ಬಂದರ್‌ನಿಂದ ಕರಾವಳಿ ಬೈಪಾಸ್ ವರೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಯ 15 ಸಾವಿರಕ್ಕೂ ಅಧಿಕ ಮೀನುಗಾರರು ಭಾಗವಹಿಸಿದ್ದಾರೆ. ಧರಣಿಯ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ.
ಮೆರವಣಿಗೆಯು ಅಂಬಲಪಾಡಿ ಜಂಕ್ಷನ್ ತಲುಪಿ, ಅಲ್ಲಿ ಧರಣಿನಿರತರು ರಸ್ತೆ ತಡೆ ನಡೆಸಲಿದ್ದಾರೆ. ಬಳಿಕ ಪ್ರತಿಭಟನಾ ಸಭೆ ನಡೆಯಲಿದೆ.
ಈ ನಡುವೆ ಮೀನುಗಾರರ ಬೃಹತ್ ಮೆರವಣಿಗೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಬಲಪಾಡಿಯಿಂದ ಕಿನ್ನಿಮೂಲ್ಕಿಯ ವರೆಗೆ ಸುಮಾರು ನಾಲ್ಕು ಕಿ.ಮೀ. ರಸ್ತೆ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಸಿ. ಕುಂದರ್, ಮುಖಂಡರಾದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಯಶ್ಪಾಲ್ ಸುವರ್ಣ ಮತ್ತಿತರರು ಧರಣಿಗೆ ನೇತೃತ್ವ ವಹಿಸಿದ್ದಾರೆ.
ಮಸೀದಿ, ಚರ್ಚ್ ವತಿಯಿಂದ ಶರಬತ್, ನೀರು ಪೂರೈಕೆ
ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಆದಿಉಡುಪಿಯ ಮಸೀದಿಯ ವತಿಯಿಂದ ಶರಬತ್ತು ವ್ಯವಸ್ಥೆ ಕಲ್ಪಿಸಲಾಗಿದೆ. ಅದೇರೀತಿ ಮಲ್ಪೆ ಮಸೀದಿಯ ವತಿಯಿಂದ ಮತ್ತು ಕಲ್ಮಾಡಿ ಚರ್ಚ್ ವತಿಯಿಂದ ಮೆರವಣಿಗೆಯಲ್ಲಿ ಸಾಗುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆದಿಉಡುಪಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಮೀನುಗಾರರ ಮೆರವಣಿಗೆ ಸಾಗುತ್ತಿದ್ದಂತೆ ಆದಿ ಉಡುಪಿ ಮಸೀದಿಯಲ್ಲಿ ನಾಪತ್ತೆಯಾಗಿರುವ ಮೀನುಗಾರರ ಸುರಕ್ಷಿತವಾಗಿ ವಾಪಸ್ಸಾಗಲಿ ಎಂದು ಆಶಿಸಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಪ್ರತಿಭಟನಾ ಮೆರವಣಿಗೆ ಮಸೀದಿ ಹೊರಭಾಗದ ರಸ್ತೆಯಲ್ಲಿ ಹಾದುಹೋಗುತ್ತಿದ್ದಂತೆ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇದೇವೇಳೆ ಪ್ರಾರ್ಥನೆಗೆ ಸ್ಪಂದಿಸಿದ ಮೆರವಣಿಗೆಯ ಉದ್ಘೋಷಕರು, ಮಸೀದಿಯಲ್ಲಿ ಮೀನುಗಾರರ ಸುರಕ್ಷತೆಗಾಗಿ ಪ್ರಾರ್ಥನೆ ನಡೆಯುತ್ತಿದ್ದು, ವೌನವಾಗಿ ಸಾಗುವಂತೆ ಮೆರವಣಿಗೆನಿರತರಿಗೆ ಸೂಚನೆ ನೀಡಿದರು.
ಉಡುಪಿ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಇಂದು ಮಧ್ಯಾಹ್ನ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಮಸೀದಿಯ ಮುಖ್ಯ ಧರ್ಮಗುರು ಹಫೀಝ್ ಅಬೂ ಸುಫಿಯಾನ್ ನೇತೃತ್ವದಲ್ಲಿ ಕಳೆದ 23 ದಿನಗಳಿಂದ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಬರುವಂತಾಗಲಿ ಎಂದು ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.







