ಮೀನುಗಾರರ ಪತ್ತೆಗೆ ಆಗ್ರಹ: ಅಂಬಲಪಾಡಿಯಲ್ಲಿ ಮೀನುಗಾರರ ಧರಣಿ, ರಸ್ತೆ ತಡೆ

ಉಡುಪಿ, ಜ.6: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ಬೋಟ್ ಹಾಗೂ ಏಳು ಮೀನುಗಾರರ ಶೀಘ್ರ ಪತ್ತೆಗೆ ಆಗ್ರಹಿಸಿ ಮೀನುಗಾರರು ಅಂಬಲಪಾಡಿಯಲ್ಲಿ ಇಂದು ಪೂರ್ವಾಹ್ನ ಬೃಹತ್ ಧರಣಿ ನಡೆಸಿದರು.
ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿದ 30 ಸಾವಿರಕ್ಕೂ ಅಧಿಕ ಮೀನುಗಾರರು ‘ನ್ಯಾಯ ಬೇಕು’ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ಧರಣಿ ಕುಳಿತ ಮೀನುಗಾರರು ನಾಪತ್ತೆಯಾಗಿ 23 ದಿನಗಳೇ ಕಳೆದರೂ ಏಳು ಮಂದಿ ಮೀನುಗಾರರನ್ನು ಪತ್ತೆಹಚ್ಚಲಾಗದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧರಣಿ, ರಸ್ತೆತಡೆಯ ಹಿನ್ನೆಲೆಯಲ್ಲಿ ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸುವ ವಾಹನಗಳ ಸಂಚಾರಕ್ಕೆ ಪೊಲೀಸರು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದಕ್ಕೂ ಮೊದಲು ಮಲ್ಪೆ ಬಂದರ್‌ನಿಂದ ಕರಾವಳಿ ಬೈಪಾಸ್ ವರೆಗೆ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಸೇರಿ ಬೃಹತ್ ಮೆರವಣಿಗೆ ನಡೆಸಿದರು.
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಸಂಘದ ಅಧ್ಯಕ್ಷ ಆನಂದ್ ಸಿ. ಕುಂದರ್, ಮುಖಂಡರಾದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ. ಶಂಕರ್, ಆರ್.ಕೆ.ಗೋಪಾಲ್, ಯು.ಆರ್.ಸಭಾಪತಿ, ಲಾಲಾಜಿ ಮೆಂಡನ್, ಉದಯ ಕುಮಾರ್, ಶೆಟ್ಟಿ, ಯಶ್ಪಾಲ್ ಸುವರ್ಣ ಮತ್ತಿತರರು ಸಾಥ್ ನೀಡಿದ್ದಾರೆ.
ಧರಣಿಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, 500 ಪೊಲೀಸರನ್ನು ನಿಯೋಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಡಿವೈಎಸ್ಪಿಗಳಾದ ಟಿ.ಆರ್.ಜೈಶಂಕರ್, ದಿನೇಶ್ ಕುಮಾರ್ ಸ್ಥಳದಲ್ಲಿ ಮೊಕ್ಕಾಂ ಇದ್ದಾರೆ.







