ವಿಧಾನಸೌಧದ ಆವರಣದಲ್ಲೇ ಲಂಚಕ್ಕೆ ಬೇಡಿಕೆ: ಮೂವರು ಉ.ಪ್ರದೇಶ ಸಚಿವರ ಆಪ್ತ ಸಹಾಯಕರ ಬಂಧನ
ಕುಟುಕು ಕಾರ್ಯಾಚರಣೆಯಲ್ಲಿ ಸೆರೆ
ಲಕ್ನೋ, ಜ.6: ಉತ್ತರ ಪ್ರದೇಶದ ಮೂವರು ಸಚಿವರ ಆಪ್ತ ಸಹಾಯಕರನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ), ಲಂಚ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಿದೆ.
ವಿಧಾನಸೌಧದ ಆವರಣದಲ್ಲೇ ಲಂಚಕ್ಕಾಗಿ ಆಗ್ರಹಿಸುತ್ತಿದ್ದುದು ಸುದ್ದಿವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಬುಧವಾರ ಈ ಕುಟುಕು ಕಾರ್ಯಾಚರಣೆ ಪ್ರಸಾರಗೊಂಡಿತ್ತು.
ಎಬಿಪಿ ಸುದ್ದಿವಾಹಿನಿ ಈ ಕುಟುಕು ಕಾರ್ಯಾಚರಣೆಯ ವಿಡಿಯೊವನ್ನು ಪ್ರಸಾರ ಮಾಡಿದ ಬಳಿಕ ಆದಿತ್ಯನಾಥ್ ಸರ್ಕಾರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಮೂವರು ಕಾರ್ಯದರ್ಶಿಗಳನ್ನು ತಕ್ಷಣ ಅಮಾನತುಗೊಳಿಸಲಾಗಿದ್ದು, ಸಿಎಂ ತಮ್ಮ ನಿವಾಸದಲ್ಲಿ ತುರ್ತು ಸಭೆ ನಡೆಸಿ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.
ಬಂಧಿತ ಕಾರ್ಯದರ್ಶಿಗಳೆಂದರೆ ಗಣಿಗಾರಿಕೆ, ಅಬಕಾರಿ, ಪಾನನಿಷೇಧ ಖಾತೆ ಸಚಿವೆ ಅರ್ಚನಾ ಪಾಂಡೆ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಓಂ ಪ್ರಕಾಶ್ ರಾಜ್ ಭರ್ ಮತ್ತು ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರ ಸಚಿವಾಲಯಗಳಲ್ಲಿ ಉದ್ಯೋಗದಲ್ಲಿದ್ದವರು. ಹಿಂದುಳಿದ ವರ್ಗಗಳ ಖಾತೆ ಸಚಿವರ ಕಾರ್ಯದರ್ಶಿ ಓಂ ಪ್ರಕಾಶ್ ಕಶ್ಯಪ್ ಎಂಬಾತ ವರ್ಗಾವಣೆಗಾಗಿ 40 ಲಕ್ಷ ರೂಪಾಯಿ ನೀಡುವಂತೆ ಆಗ್ರಹಿಸಿದ್ದು, ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿತ್ತು.