ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಕಲಬುರಗಿ, ಜ.6: 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲಿ ನಡೆಯಲಿದೆ.
ಸದ್ಯ ಧಾರವಾಡದಲ್ಲಿ ನಡೆಯುತ್ತಿರುವ 84ನೇ ಕನ್ಮಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ನಡೆದ ಕಾರ್ಯಕಾರಣಿ ಸಮಿತಿಯಲ್ಲಿ 85ನೇ ಸಮ್ಮೇಳನವನ್ನು ಕಲಬುರಗಿಯಲ್ಲಿ ನಡೆಸಲು ತೀರ್ಮಾಸಲಾಗಿದೆ.
85ನೇ ಸಮ್ಮೇಳನಕ್ಕೆ ಕಲಬುರಗಿಯನ್ನು ಆಯ್ಕೆ ಮಾಡಿರುವುದಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಮನು ಬಳಿಗಾರ ಹಾಗೂ ಕಾರ್ಯಕಾರಿ ಸಮಿತಿಯ ಇತರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆ ಕನ್ನಡನಾಡಿಗೆ ಹಿರಿಮೆ ತಂದುಕೊಟ್ಟ ಕನ್ನಡದ ಮೊಟ್ಟಮೊದಲಗ್ರಂಥ ಕವಿರಾಜಮಾರ್ಗ ರಚಿತವಾದ ಕನ್ನಡದ ಸೊಗಡಿನ ನೆಲವಾಗಿದ್ದು ಕನ್ನಡದ ಹೆಮ್ಮೆಯ ಸಮ್ಮೇಳನವನ್ನು ನಡೆಸಲು ಕಲಬುರಗಿಯನ್ನು ಆಯ್ಕೆ ಮಾಡಿಕೊಂಡಿದ್ದು ಸೂಕ್ತವೂ ಹಾಗೂ ಸಮಯೋಚಿತವಾಗಿದೆ ಎಂದು ಪ್ರಿಯಾಂಕ್ ಖರ್ಗೆಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಸಂಸದರಾದ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆಯ ಮೇರೆಗೆ, ಅವರ ಆಶಯಕ್ಕೆ ಸ್ಪಂದಿಸಿ ಸಾಹಿತ್ಯ ಸಮ್ಮೇಳನವನ್ನು ಕಲಬುರಗಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ವೀರಭದ್ರ ಸಿಂಪಿ ಮತ್ತು ಪರಿಷತ್ ನ ಇತರೆ ಗೌರವಾನ್ವಿತ ಸದಸ್ಯರು, ಲೇಖಕರು, ಸಾಹಿತಿಗಳು, ಬರಹಗಾರರು ಹಾಗೂ ಕನ್ಮಡಾಭಿಮಾನಿಗಳು ಈ ಸಂದರ್ಭದಲ್ಲಿ ಅಭಿನಂದನಾರ್ಹರು. 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ನಡೆಸಲು ಕಲಬುರಗಿ ಜಿಲ್ಲೆಯ ಎಲ್ಲ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಬರಹಗಾರರು ಹಾಗೂ ಸಂಘಸಂಸ್ಥೆಗಳು ಮುಕ್ತ ಮನಸಿನಿಂದ ಕೈ ಜೋಡಿಸಿ ರಾಷ್ಟ್ರಕೂಟರ ನಾಡಿನ ಕೀರ್ತಿಯನ್ನು ರಾಷ್ಟ್ರಕ್ಕೆ ಹಾಗೂ ಹೊರರಾಷ್ಟ್ರಕ್ಕೆ ತಲುಪಿಸಬೇಕೆಂದು ಅವರು ಕೋರಿದ್ದಾರೆ.







