ಜ.8: ವಿಜಯಾ ಬ್ಯಾಂಕ್ ವಿಲೀನದ ವಿರುದ್ಧ ಐವನ್‌ರಿಂದ ಮೌನ ಪ್ರತಿಭಟನೆ

ಮಂಗಳೂರು, ಜ.6: ಲಾಭದಲ್ಲಿರುವ ದ.ಕ.ಜಿಲ್ಲಾ ಮೂಲದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ ದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯ ವಿರುದ್ಧ ಧ್ವನಿ ಎತ್ತದ ದ.ಕ. ಜಿಲ್ಲಾ ಸಂಸದ ಸಹಿತ ಕೇಂದ್ರ ಸಂಪುದಲ್ಲಿರುವ ರಾಜ್ಯದ ಐವರು ಸಚಿವರ ಮೌನವನ್ನು ಖಂಡಿಸಿ ಜ. 8ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರು ಪುರಭವನದ ಮುಂದಿನ ಗಾಂಧಿಪ್ರತಿಮೆಯ ಬಳಿ ಮೌನ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ವಿಜಯಾ ಬ್ಯಾಂಕನ್ನು ವಿಲೀನಗೊಳಿಸುವ ಮೂಲಕ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ದ.ಕ.ಜಿಲ್ಲಾದ್ಯಂತ ಜನರು ಪ್ರತಿಭಟಿಸುತ್ತಿದ್ದಾರೆ. ಆದರೂ ಜಿಲ್ಲೆಯ ಸಂಸದರು, ಶಾಸಕರ ಸಹಿತ ಬಿಜೆಪಿಗರು ಮೌನ ತಾಳಿದ್ದಾರೆ. ವಿಲೀನದ ವಿರುದ್ಧ ಧ್ವನಿ ಎತ್ತದೆ ಮೌನ ತಾಳಿರುವ ಸಂಸದರ ಸಹಿತ ಜನಪ್ರತಿನಿಧಿಗಳ ಮನಪರಿವರ್ತನೆಗಾಗಿ ಈ ಮೌನ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ವಿಜಯಾ ಬ್ಯಾಂಕ್ ರೈತರಿಗಾಗಿಯೇ ಮುಲ್ಕಿ ಸುಂದರ ರಾಮ ಶೆಟ್ಟಿ, ಎ.ಬಿ.ಶೆಟ್ಟಿಯಂತಹವರು ಕಟ್ಟಿದ್ದಾರೆ. ಈಗ ಲಾಭದಲ್ಲೂ ಇದೆ. ಆದರೆ ಸಂಸದರು ಬಂಡವಾಳಶಾಹಿಗಳಿಗೆ ಸಾಲ ನೀಡಿ ನಷ್ಟದಲ್ಲಿರುವ ಬರೋಡಾ ಬ್ಯಾಂಕ್‌ನೊಂದಿಗೆ ವಿಜಯಾ ಬ್ಯಾಂಕನ್ನು ವಿಲೀನಗೊಳಿಸಿದ್ದರೂ ಏನೂ ಆಗಿಲ್ಲ ಎಂಬಂತೆ ಮೌನ ತಾಳಿರುವುದು ಖಂಡನೀಯ. ಇದು ಜಿಲ್ಲೆಗೆ ಆದ ಅನ್ಯಾಯ ಮತ್ತು ಅವಮಾನ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಮೌನ ಪ್ರತಿಭಟನೆ ಮಾಡಲಾಗುವುದು ಎಂದು ಐವನ್ ಡಿಸೋಜ ಹೇಳಿದರು.
ವಿಜಯಾ ಬ್ಯಾಂಕ್ ಶಾಖೆಗಳ ಮುಂದೆ ಧರಣಿ: ಜಿಲ್ಲೆಯಲ್ಲಿ ವಿಜಯಾ ಬ್ಯಾಂಕ್‌ನ 79 ಶಾಖೆಗಳಿವೆ. ಜಿಲ್ಲಾ ಕಾಂಗ್ರೆಸ್‌ನ ಕರೆಯಂತೆ ಜ.10ರಂದು ಈ ಎಲ್ಲಾ ಶಾಖೆಗಳಲ್ಲಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ನೆರವಿನೊಂದಿಗೆ ಧರಣಿ ನಡೆಸಲಾಗುವುದು ಎಂದು ಐವನ್ ಡಿಸೋಜ ತಿಳಿಸಿದ್ದಾರೆ.
ಜ.12ರೊಳಗೆ ಮರಳು ಸಮಸ್ಯೆಗೆ ಪರಿಹಾರ: ಕರಾವಳಿಯಲ್ಲಿ ಮರಳು ಸಮಸ್ಯೆ ಜಟಿಲವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೆ ಬೆಂಗಳೂರಿನಲ್ಲಿ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಹತ್ವದ ಸಭೆಯಾಗಿದೆ. ದ.ಕ. ಜಿಲ್ಲಾಧಿಕಾರಿಯು ಮರಳು ಸಮಸ್ಯೆಯ ಪರಿಹಾರದ ಭರವಸೆ ನೀಡಿದ್ದಾರೆ. ಹಾಗಾಗಿ ಜ.12ರೊಳಗೆ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಐವನ್ ಡಿಸೋಜ ನುಡಿದರು.
ದ.ಕ. ಜಿಲ್ಲೆಯಲ್ಲಿ 22 ಮರಳು ದಿಬ್ಬಗಳಿವೆ. ಆ ಪೈಕಿ 79 ಮಂದಿಗೆ 12 ದಿಬ್ಬಗಳಲ್ಲಿ ಮರಳುಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿದೆ. ಉಳಿದ 10 ದಿಬ್ಬಗಳಲ್ಲೂ ಮರಳು ತೆಗೆಯಲು ಜಿಲ್ಲಾಧಿಕಾರಿ ಅವಕಾಶ ಕಲ್ಪಿಸಿಕೊಡಬೇಕಿತ್ತು. 22 ಮರಳು ದಿಬ್ಬಗಳಲ್ಲೂ ಮರಳುಗಾರಿಕೆಯಾದರೆ ಬೆಲೆಗಳಲ್ಲಿ ಪೈಪೋಟಿಯಾಗದು. ಗ್ರಾಹಕರಿಗೂ ಸುಲಭವಾಗಿ ಕಡಿಮೆ ದರದಲ್ಲಿ ಮರಳು ಸಿಗುವ ಸಾಧ್ಯತೆ ಇದೆ. ಇದೀಗ ಸಮಸ್ಯೆ ಜಟಿಲವಾಗಿದ್ದು, ಇದರ ಪರಿಹಾರಕ್ಕೆ ರೂಪುರೇಷ ಸಿದ್ಧಗೊಂಡಿದ್ದು, ಜ.12ರೊಳಗೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಾಗೇಂದ್ರ ಕುಮಾರ್, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







