ಕಬಡ್ಡಿಗೆ ವಿಶ್ವವ್ಯಾಪಿ ಮನ್ನಣೆ: ಶಾಸಕ ವೇದವ್ಯಾಸ ಕಾಮತ್
ದ.ಕ.ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯ

ಮಂಗಳೂರು, ಜ.6: ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿಗೆ ಸರಕಾರ ಮತ್ತು ಸಂಘಸಂಸ್ಥೆಗಳ ಪ್ರೋತ್ಸಾಹದಿಂದ ವಿಶ್ವವ್ಯಾಪಿ ಮನ್ನಣೆ ಸಿಕ್ಕಿದೆ. ಇದನ್ನು ಪ್ರತಿಯೊಬ್ಬ ಕಬಡ್ಡಿ ಆಟಗಾರರು ತಿಳಿದುಕೊಂಡು ಈ ಆಟದ ವರ್ಚ್ಛಸ್ಸು ಹೆಚ್ಚಿಸಲು ಪ್ರಾಮಾಣಿಕ ಸೇವೆ ಮಾಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಶೋಸಿಯೇಶನ್ ಮತ್ತು ಮಂಗಳೂರು ತಾಲೂಕು (ನಗರ) ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಮಹಿಳೆಯರ ಮತ್ತು ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಬಡ್ಡಿ ಕ್ರೀಡೆಗೂ ಈಗಿನ ಕಬಡ್ಡಿ ಕ್ರೀಡೆಗೂ ವ್ಯತ್ಯಾಸವಿದೆ. ಇಂದಿನ ಕ್ರೀಡೆಯ ಸ್ವರೂಪ ಬದಲಾದರೂ ಕೂಡಾ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿವೆ. ಇದೀಗ ಈ ಕ್ರೀಡೆಗೆ ವಿಶ್ವಮನ್ನಣೆಯೂ ಪ್ರಾಪ್ತಿಯಾಗಿದೆ. ಹಾಗಾಗಿ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಹೊಣೆ ಎಲ್ಲರದ್ದಾಗಿದೆ ಎಂದು ವೇದವ್ಯಾಸ ಕಾಮತ್ ನುಡಿದರು.
ರಾಜ್ಯ ಅಮೆಚೂರು ಕಬಡ್ಡಿ ಅಶೋಸಿಯೇಶನ್‌ನ ಅಧ್ಯಕ್ಷ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿದರು. ವೇದಿಕೆಯಲ್ಲಿ ಮೇಯರ್ ಭಾಸ್ಕರ ಕೆ., ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಶೋಸಿಯೇಶನ್‌ನ ಗೌರವಾಧ್ಯಕ್ಷ ಅಮರನಾಥ ರೈ, ಮಂಗಳಾ ಕ್ರೀಡಾಂಗಣದ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜ, ಅಸೋಸಿಯೇಶನ್‌ನ ಪದಾಧಿಕಾರಿಗಳಾದ ಪುರುಷೋತ್ತ ಪೂಜಾರಿ, ವಿನಯ ಚೌಟ, ಪ್ರೇಮನಾಥ ಉಳ್ಳಾಲ್, ವಿಜಯ ಪುತ್ರನ್, ಮೋಹಿತ್ ಸುವರ್ಣ, ಪುಷ್ಪರಾಜ ಚೌಟ, ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು.







