ನ್ಯಾಷನಲ್ ಹೆರಾಲ್ಡ್ ಪ್ರಕರಣ: ಏಕಸದಸ್ಯ ಪೀಠದ ಆದೇಶದ ವಿರುದ್ಧ ಎಜೆಎಲ್ ಮೇಲ್ಮನವಿ

ಹೊಸದಿಲ್ಲಿ, ಜ.6: ಹೊಸದಿಲ್ಲಿಯ ಪ್ರೆಸ್ ಎನ್‌ಕ್ಲೇವ್ ನಲ್ಲಿರುವ ಕಟ್ಟಡವನ್ನು ಖಾಲಿ ಮಾಡಬೇಕು ಎಂದು ದಿಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು 2018ರ ಡಿಸೆಂಬರ್ 21ರಂದು ನೀಡಿದ್ದ ಆದೇಶದ ವಿರುದ್ಧ ಅಸೋಸಿಯೇಟೆಡ್ ಜರ್ನಲ್ಸ್ ಲಿ. (ಎಜೆಎಲ್) ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ಜನವರಿ 5ರಂದು ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಎಜೆಎಲ್ ವಕೀಲ ಸುನಿಲ್ ಫೆರ್ನಾಂಡಿಸ್ ತಿಳಿಸಿದ್ದು ಜನವರಿ 9ರಂದು ಅರ್ಜಿಯ ವಿಚಾರಣೆ ನಡೆಯುವ ನಿರೀಕ್ಷೆಯಿದೆ ಎಂದಿದ್ದಾರೆ. ಐಟಿಒ ಆವರಣದಲ್ಲಿರುವ ಪ್ರೆಸ್ ಎನ್‌ಕ್ಲೇವ್‌ನಲ್ಲಿರುವ ಕಟ್ಟಡವನ್ನು ಎಜೆಎಲ್‌ಗೆ ಕೇಂದ್ರ ಸರಕಾರ ಲೀಸ್‌ಗೆ ನೀಡಿತ್ತು. ಆದರೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಎಜೆಎಲ್ ಪತ್ರಿಕೆಯ ಪ್ರಕಟಣೆ ನಿಲ್ಲಿಸಿದ್ದು , ಈ ಕಟ್ಟಡದಲ್ಲಿ ಯಾವುದೇ ಮುದ್ರಣ ಅಥವಾ ಪ್ರಕಾಶನ ಕೆಲಸ ನಡೆಯುತ್ತಿಲ್ಲ. ಆದ್ದರಿಂದ 56 ವರ್ಷ ಹಿಂದಿನ ಲೀಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿತ್ತು.
ಅಲ್ಲದೆ 2 ವಾರದೊಳಗೆ ಕಟ್ಟಡವನ್ನು ಖಾಲಿ ಮಾಡಬೇಕು. ಇಲ್ಲದಿದ್ದರೆ ಸರಕಾರಿ ಕಟ್ಟಡ(ಅನಧಿಕೃತ ನಿವಾಸಿಗರ ತೆರವು) ಕಾಯ್ದೆ 1971ರಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು.
ಇದನ್ನು ಪ್ರಶ್ನಿಸಿ ಎಜೆಎಲ್ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರ ಸರಕಾರದ ಆರೋಪವನ್ನು ಅಲ್ಲಗಳೆಯುವ ಸೂಕ್ತ ಪುರಾವೆಗಳನ್ನು ಎಜೆಎಲ್ ಒದಗಿಸಲು ವಿಫಲವಾಗಿದೆ ಎಂದು ತಿಳಿಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ, ಕೇಂದ್ರದ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು. 2016-17ರಿಂದ ಇಂಗ್ಲಿಷ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ದಿನಪತ್ರಿಕೆ, ಹಿಂದಿಯಲ್ಲಿ ನವ್‌ಜೀವನ್ ಮತ್ತು ಉರ್ದುವಿನಲ್ಲಿ ಖವಾಮಿ ಅವಾಝ್ ಪತ್ರಿಕೆಯ ಡಿಜಿಟಲ್ ಆವೃತ್ತಿ ಪ್ರಕಟಣೆ ಆರಂಭವಾಗಿದೆ. 2018ರ ಸೆಪ್ಟೆಂಬರ್ 24ರಿಂದ ‘ನ್ಯಾಷನಲ್ ಹೆರಾಲ್ಡ್ ಸಂಡೆ’ ವಾರಪತ್ರಿಕೆ , ಅಕ್ಟೋಬರ್‌ನಿಂದ ಹಿಂದಿಯಲ್ಲಿ ನವಜೀವನ್ ವಾರಪತ್ರಿಕೆ ಪ್ರಕಟಣೆ ಆರಂಭವಾಗಿದೆ ಎಂದು ಎಜೆಎಲ್ ತಿಳಿಸಿದೆ.







