‘ಎಲ್ಲೈಸಿ ದಲಿತ ನೌಕರರ ಬೇಡಿಕೆ ಈಡೇರಿಕೆಗೆ ಪ್ರಯತ್ನ’

ಉಡುಪಿ, ಜ.7: ಭಾರತೀಯ ಜೀವವಿಮಾ ನಿಗಮದ ದಲಿತ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಬಾಗೀಯ ಕಛೇರಿಯ ಹಿರಿಯ ವಿಭಾಗಾಧಿಕಾರಿ ಪಿ. ವಿಶ್ವೇಶ್ವರರಾವ್ ಭರವಸೆ ನೀಡಿದ್ದಾರೆ.
ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಭಾರತೀಯ ಜೀವವಿಮಾ ನಿಗಮದ ಉಡುಪಿ, ಚಿಕ್ಕಮಗಳೂರು ಹಾಗೂ ಮಂಗಳೂರು ಜಿಲ್ಲೆಯ ವಿಭಾಗೀಯ ಮಟ್ಟದ 8ನೇ ಎಸ್‌ಸಿ/ಎಸ್‌ಟಿ ಮತ್ತು ನವಬೌದ್ಧ ನೌಕರರ ಕ್ಷೇಮಾಭಿವೃಧ್ಧಿ ಸಂಘದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹೈದರಾಬಾದ್‌ನ ಎಸ್‌ಸಿ/ಎಸ್‌ಟಿ ವಲಯ ಮಟ್ಟದ ಅಧ್ಯಕ್ಷ ಸಿದ್ಧಾರ್ಥನ್ ಮಾತನಾಡಿ, ಅಂಬೇಡ್ಕರ್ ಸಾವಿಗೆ ನಾವೇ ಕಾರಣರಾಗುವಂತೆ ನಡೆದುಕೊಳ್ಳದೆ, ದಲಿತ ಸಮಾಜದ ಪರಿರ್ವತನೆಗೆ ಎಲ್ಲೈಸಿ ನೌಕರರು ಕೈಜೋಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದಲಿತ ಚಿಂತಕ ಜಯನ್ ಮಲ್ಪೆ, ದಲಿತ ವಿದ್ಯಾವಂತ ನೌಕರರು ಈಗಲೂ ಸಮಾಜದಲ್ಲಿ ಮೂಲೆ ಗುಂಪಾಗಿ ಬದುಕುತ್ತಿರುವ ನಮ್ಮ ಬಂಧುಗಳನ್ನು ಕೈ ಹಿಡಿದು ಮೇಲಕ್ಕೆತ್ತಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಎಸಿಎಟಿ/ಎಸ್‌ಟಿ ಮತ್ತು ನವಬೌದ್ಧ ನೌಕರರ ಕ್ಷೇಮಾಭಿವೃಧ್ಧಿ ಸಂಘದ ಉಡುಪಿ ವಲಯದ ಅಧ್ಯಕ್ಷ ಸೋಮ್ಲ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾರುಕಟ್ಟೆ ವ್ಯವಸ್ಥಾಪಕ ವೆಂಕಟರಮಣ ಶಿರೂರು, ಮೆನೇಜರ್ ಶಶಿಕಲಾ ಎಸ್.ಕೆ, ವಲಯ ಮಟ್ಟದ ಮುಖ್ಯ ಕಾರ್ಯದರ್ಶಿ ಸುಬಾಸ್ ಕುಮಾರ್, ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ನಂದಕುಮಾರ್, ವಲಯದ ಹಣಕಾಸು ವಿಭಾಗ ಮುಖ್ಯಸ್ಥ ಅಣ್ಣಯ್ಯ ನೀಲಾವರ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ರಾಮ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಟಿ ನಾಯ್ಕ ವಂದಿಸಿ, ಬಿ.ಡಿ. ಸದಾಶಿವ ಕಾರ್ಯಕ್ರಮ ನಿರೂಪಿಸಿದರು.







