‘ಕೌರವರು ಪ್ರಣಾಳ ಶಿಶುಗಳಾಗಿದ್ದರು’ ಎಂಬ ಹೇಳಿಕೆಗೆ ವಿಜ್ಞಾನಿಗಳ ಖಂಡನೆ

ಜಲಂಧರ್(ಪಂಜಾಬ್),ಜ.6: ಶುಕ್ರವಾರ ಇಲ್ಲಿ ಭಾರತೀಯ ವಿಜ್ಞಾನ ಸಮ್ಮೇಳನ(ಐಎಸ್‌ಸಿ)ದಲ್ಲಿ ‘ಕೌರವರು ಪ್ರಣಾಳ ಶಿಶುಗಳಾಗಿದ್ದರು’ ಎಂಬ ಆಂಧ್ರ ವಿವಿಯ ಕುಲಪತಿ ಜಿ.ನಾಗೇಶ್ವರ ರಾವ್ ಅವರ ಪ್ರತಿಪಾದನೆಯನ್ನು ಖಂಡಿಸಿರುವ ವಿಜ್ಞಾನಿಗಳ ಸಂಘಟನೆ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ(ಬಿಎಸ್‌ಎಸ್)ಯು,ಪುರಾಣವನ್ನು ವಿಜ್ಞಾನದೊಂದಿಗೆ ಬೆರೆಸುವುದು ತಪ್ಪಾಗುತ್ತದೆ ಎಂದು ಹೇಳಿದೆ.
ಸುಲಭವಾಗಿ ಪ್ರಭಾವಕ್ಕೊಳಗಾಗುವ ಯುವಮನಸ್ಸುಗಳ ಎದುರಿನಲ್ಲಿ ಪ್ರಾಚೀನ ಭಾರತದ ಕುರಿತು ಇಂತಹ ಅಂಧ ರಾಷ್ಟ್ರವಾದಿ ಹೇಳಿಕೆಗಳು ಹತಾಶೆಯನ್ನು ಮೂಡಿಸಿವೆ. ಇವು ವಿಜ್ಞಾನ ಕ್ಷೇತ್ರಕ್ಕೆ ಗಣ್ಯವ್ಯಕ್ತಿಗಳ ಪ್ರಾಮಾಣಿಕ ಕೊಡುಗೆಗಳನ್ನು ಕಳಂಕಿತಗೊಳಿಸುತ್ತವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಬಿಎಸ್‌ಎಸ್,ಪುರಾಣ ಗ್ರಂಥಗಳು ಮತ್ತು ಮಹಾಕಾವ್ಯಗಳು ಕಾವ್ಯಮಯವಾಗಿದ್ದು,ಓದಿ ಆನಂದಿಸಬಹುದಾದ ಅವು ನೀತಿಗಳನ್ನು ಬೋಧಿಸುತ್ತವೆ ಮತ್ತು ಸಮೃದ್ಧ ಕಲ್ಪನೆಗಳನ್ನು ಒಳಗೊಂಡಿವೆ. ಆದರೆ ಈ ಕಲ್ಪನೆಗಳು ವೈಜ್ಞಾನಿಕವಾಗಿ ರೂಪುಗೊಂಡಿದ್ದಲ್ಲ ಮತ್ತು ಸಿಂಧುತ್ವ ಹೊಂದಿರುವ ಸಿದ್ಧಾಂತಗಳಲ್ಲ. ಇವು ಪ್ರಾಚೀನ ಭಾರತದ ಕುರಿತು ಅಂಧ ರಾಷ್ಟ್ರವಾದಿ ಹೇಳಿಕೆಗಳಾಗಿವೆ ಎಂದು ಹೇಳಿದೆ.
ಐಸಿಎಸ್‌ನ ಹಿಂದಿನ ಅಧ್ಯಕ್ಷರಾದ ಆಚಾರ್ಯ ಪ್ರಫುಲ್‌ಚಂದ್ರ ರೇ,ಸರ್ ರಾಮನಾಥ ಚೋಪ್ರಾ ಮತ್ತು ಪಿ.ಪಾರಿಜ ಅವರನ್ನು ನೆನಪಿಸಿರುವ ಹೇಳಿಕೆಯು, ಅವರು ಪ್ರಾಚೀನ ಭಾರತದಲ್ಲಿನ ವೈಜ್ಞಾನಿಕ ಸಾಧನೆಗಳಿಗೆ ಗೌರವ ನೀಡುವಾಗ ವಸ್ತುನಿಷ್ಠ ಮತ್ತು ಶಿಕ್ಷಣಾತ್ಮಕ ರೀತಿಯನ್ನು ಅನುಸರಿಸಿದ್ದರು ಎಂದು ತಿಳಿಸಿದೆ.
ಕಾಂಡಕೋಶಗಳ ಸಂಶೋಧನೆ,ಪ್ರಣಾಳ ಶಿಶು ಸೃಷ್ಟಿ, ಉತ್ಪೇಕ್ಷಕ ಮತ್ತು ನಿರ್ದೇಶಿತ ಕ್ಷಿಪಣಿಗಳು,ಸಾಪೇಕ್ಷತಾ ಸಿದ್ಧಾಂತ,ಕ್ವಾಂಟಮ್ ಯಂತ್ರಶಾಸ್ತ್ರ ಇತ್ಯಾದಿಗಳೆಲ್ಲ ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕವೇ ರೂಪುಗೊಂಡಿವೆ. ಸುಸಂಗತ ವೈಜ್ಞಾನಿಕ ತಳಹದಿಯಿಲ್ಲದೆ ಯಾವುದೇ ತಂತ್ರಜ್ಞಾನವನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಮುಖ್ಯವಾಗಿದೆ ಎಂದಿರುವ ಬಿಎಸ್‌ಎಸ್, ನಿರ್ದೇಶಿತ ಕ್ಷಿಪಣಿಗಳ ನಿರ್ಮಾಣಕ್ಕೆ ವಿದ್ಯುಚ್ಛಕ್ತಿ, ಲೋಹಶಾಸ್ತ್ರ ಮತ್ತು ಯಂತ್ರಶಾಸ್ತ್ರದ ನೆರವು, ಉತ್ಪೇಕ್ಷಕ ಚಲನೆ ,ರಾಡಾರ್‌ಗಳು, ದೃಗ್ವಿಜ್ಞಾನ, ಚಲನೆಯ ಸಂವೇದಕಗಳು, ನಿಸ್ತಂತು ಸಂವಹನ ಇವುಗಳು ಅಗತ್ಯವಾಗಿವೆ ಮತ್ತು ಪ್ರಾಚೀನ ಭಾರತದಲ್ಲಿ ವೈಜ್ಞಾನಿಕ ಜ್ಞಾನದ ಈ ಮೂಲಭೂತ ಸ್ತಂಭಗಳು ಅಸ್ತಿತ್ವದಲ್ಲಿದ್ದವು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದಿದೆ.
ಭಾರತವು ಸಾವಿರಾರು ವರ್ಷಗಳ ಹಿಂದೆಯೇ ನಿರ್ದೇಶಿತ ಕ್ಷಿಪಣಿಗಳ ತಂತ್ರಜ್ಞಾನವನ್ನು ಹೊಂದಿತ್ತು ಎಂದೂ ರಾವ್ ಪ್ರತಿಪಾದಿಸಿದ್ದರು.
ಐಎಸ್‌ಸಿಯಲ್ಲಿ ಇಂತಹ ತಪ್ಪುಗಳು ನಡೆಯುತ್ತಿರುವುದು ಇದೇ ಮೊದಲಲ್ಲ. 2015ರ ಸಮ್ಮೇಳನದಲ್ಲಿ ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದವು ಎಂದು ಪ್ರತಿಪಾದಿಸಲಾಗಿತ್ತು,ಆದರೆ ವೈಜ್ಞಾನಿಕ ಸಮುದಾಯವು ಅದನ್ನು ತಿರಸ್ಕರಿಸಿತ್ತು.







