ರೈತರು ಸಾಮೂಹಿಕವಾಗಿ ಬಂಡೇಳುವ ಮುನ್ನ ಕ್ರಮಕೈಗೊಳ್ಳಿ,: ಶರದ್ ಪವಾರ್ ಪತ್ರ
“ಆರ್ಥಿಕ ಮುಗ್ಗಟ್ಟಿನಿಂದ ಕಬ್ಬು ಬೆಳೆಗಾರರು ಆತ್ಮಹತ್ಯೆ ಹೆಚ್ಚಳ”
ಹೊಸದಿಲ್ಲಿ,ಜ.6: ಆರ್ಥಿಕ ಮುಗ್ಗಟ್ಟಿನಿಂದಾಗಿ ದೇಶದಲ್ಲಿ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಬೆಟ್ಟು ಮಾಡಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು,ರೈತರು ಸಾಮೂಹಿಕವಾಗಿ ಬಂಡೇಳುವುದನ್ನು ತಡೆಯಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಸಣ್ಣ ಮತ್ತು ಸೀಮಿತ ಸಾಮರ್ಥ್ಯದ ಕಬ್ಬು ಬೆಳೆಗಾರರಲ್ಲಿ ಮನೆ ಮಾಡಿರುವ ತೀವ್ರ ಅಶಾಂತಿ ಮತ್ತು ಖಿನ್ನತೆಗಳನ್ನು ತನ್ನ ಪತ್ರದಲ್ಲಿ ಪ್ರಮುಖವಾಗಿ ಬಿಂಬಿಸಿರುವ ಪವಾರ್,ಇಂತಹ ರೈತರಿಗೆ ಪರಿಹಾರವನ್ನು ಕಲ್ಪಿಸಲು ಹಲವಾರು ಕ್ರಮಗಳನ್ನೂ ಸೂಚಿಸಿದ್ದಾರೆ.
ದಾಖಲೆ ಪ್ರಮಾಣದಲ್ಲಿ ಸಕ್ಕರೆಯ ಉತ್ಪಾದನೆ ಮತ್ತು ಬೆಲೆಗಳು ಕುಸಿದಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಹಣವನ್ನು ಸಕಾಲಕ್ಕೆ ಮತ್ತು ಸಂಪೂರ್ಣವಾಗಿ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಸಾಧ್ಯವಾಗುತ್ತಿಲ್ಲ. ಇದು ದೇಶಾದ್ಯಂತ ಕಬ್ಬು ಬೆಳೆಯುವ ಸಣ್ಣ ಪ್ರಮಾಣದ ರೈತರಲ್ಲಿ ತೀವ್ರ ಅಶಾಂತಿ ಮತ್ತು ಖಿನ್ನತೆಯನ್ನು ಹುಟ್ಟುಹಾಕಿದೆ. ಹಣಕಾಸು ಮುಗ್ಗಟ್ಟಿನಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಕಬ್ಬು ಬೆಳೆಗಾರರಿಂದ ಸಾಮೂಹಿಕ ಬಂಡಾಯವನ್ನು ತಡೆಯಲು ತುರ್ತಾಗಿ ಈ ಬಿಕ್ಕಟ್ಟನ್ನು ಬಗೆಹರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ತಕ್ಷಣವೇ ಮಧ್ಯಪ್ರವೇಶಿಸುವಂತೆ ಪ್ರಧಾನಿಯವರನ್ನು ಕೋರಿಕೊಂಡಿರುವ ಪವಾರ್,ಉತ್ಪಾದನಾ ವೆಚ್ಚ ವಸೂಲಾಗುವಂತಾಗಲು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿ.ಗೆ ಈಗಿನ 29 ರೂ.ಗಳಿಂದ 34 ರೂ.ಗಳಿಗೆ ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ.
ಕೇಂದ್ರವು ಸಕ್ಕರೆ ರಫ್ತನ್ನು ಕಡ್ಡಾಯಗೊಳಿಸಿರುವುದರ ಕುರಿತಂತೆ ಅವರು,ಸರಕಾರವು ಸಬ್ಸಿಡಿಯನ್ನು ಒದಗಿಸುತ್ತಿದ್ದರೂ ಸಕ್ಕರೆಯನ್ನು ರಫ್ತು ಮಾಡಲು ಕಾರ್ಖಾನೆಗಳಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಬೆಟ್ಟು ಮಾಡಿದ್ದಾರೆ. ಕಾರ್ಖಾನೆಗಳು ಅಡವಿರಿಸಿರುವ ಸಕ್ಕರೆಯ ದಾಸ್ತಾನನ್ನು ರಫ್ತಿಗಾಗಿ ಬಿಡುಗಡೆಗೊಳಿಸುವಂತೆ ಬ್ಯಾಂಕುಗಳಿಗೆ ಸೂಚಿಸುವಲ್ಲಿ ವಿತ್ತ ಸಚಿವಾಲಯದಡಿಯ ಹಣಕಾಸು ಸೇವೆಗಳ ಇಲಾಖೆಯ ನಿಷ್ಕ್ರಿಯತೆಯು ರಫ್ತು ಕ್ಷೇತ್ರದಲ್ಲಿ ನಿರಾಶಾದಾಯಕ ಸಾಧನೆಗೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.