ದೋಷಪೂರ್ಣ ಎಟಿಎಂ ಸಮಸ್ಯೆ ಪರಿಹರಿಸಲು ಆರ್‌ಬಿಐಗೆ ಸಂಸದೀಯ ಸಮಿತಿ ಸೂಚನೆ
ಹೊಸದಿಲ್ಲಿ,ಜ.6: ಬಲವಂತದ ನಗದು ಬಿಕ್ಕಟ್ಟಿನ ಸ್ಥಿತಿಯನ್ನು ನಿವಾರಿಸಲು ಕಾರ್ಯ ನಿರ್ವಹಿಸುವುದನ್ನು ಕಾಯಂ ಆಗಿ ನಿಲ್ಲಿಸಿರುವ ಎಟಿಎಂಗಳ ಸಮಸ್ಯೆಯನ್ನು ಬಗೆಹರಿಸುವಂತೆ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಆರ್‌ಬಿಐಗೆ ಸೂಚಿಸಿದೆ.
ಸಮಿತಿಯು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿರುವ ತನ್ನ ವರದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಟಿಎಂಗಳನ್ನು ಸ್ಥಾಪಿಸುವಂತೆ ಬ್ಯಾಂಕುಗಳಿಗೂ ಸೂಚಿಸಿದೆ.
ಆರ್‌ಬಿಐ ಅಂಕಿಅಂಶಗಳಂತೆ 2018,ಸೆಪ್ಟೆಂಬರ್ ಅಂತ್ಯಕ್ಕೆ ದೇಶದಲ್ಲಿ 2,21,492 ಎಟಿಎಂ ಯಂತ್ರಗಳಿದ್ದವು.
ಡಿಜಿಟಲ್ ವಹಿವಾಟು ಸಾರ್ವತ್ರಿಕಗೊಳ್ಳುವುದರಿಂದ ಇನ್ನೂ ಬಹಳಷ್ಟು ದೂರವೇ ಇರುವುದರಿಂದ ನಗದು ಹಣದ ಬಿಕ್ಕಟ್ಟು ಉಂಟಾಗದಂತೆ ಎಟಿಎಂ ಯಂತ್ರಗಳು ಕಾರ್ಯ ನಿರ್ವಹಿಸದಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಆರ್‌ಬಿಐ ಮತ್ತು ಎಟಿಎಂಗಳ ಕೊರತೆಯನು ತ್ವರಿತವಾಗಿ ನೀಗಿಸುವಂತೆ ಬ್ಯಾಂಕುಗಳಿಗೆ ಸಮಿತಿಯು ಆಗ್ರಹಿಸುತ್ತದೆ ಎಂದು ವರದಿಯು ತಿಳಿಸಿದೆ. ಆರ್‌ಬಿಐನ ನೋಟು ನಿಷೇಧ ಕ್ರಮವು ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಎಟಿಎಂಗಳಿಗೆ ನಗದು ಪೂರೈಕೆಯನ್ನು ಹೆಚ್ಚಿಸಿಲ್ಲ ಅಥವಾ ನಗದು ಪೂರೈಕೆ ಸಮಸ್ಯೆಯನ್ನು ಬಗೆಹರಿಸಿಲ್ಲ ಮತ್ತು ಇದರಿಂದಾಗಿ ಹಲವಾರು ಎಟಿಎಂಗಳು ಅನಿವಾರ್ಯವಾಗಿ ಮುಚ್ಚುವಂತಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ಬೆಟ್ಟುಮಾಡಿದೆ.
ಬ್ಯಾಂಕುಗಳಲ್ಲಿ ಹೆಚ್ಚೆಚ್ಚು ಡೆಬಿಟ್ ಕಾರ್ಡ್‌ಗಳ ವಿತರಣೆಯಾಗುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನಧನ ಖಾತೆಗಳು ತೆರೆಯಲ್ಪಟ್ಟಿವೆ. ವಿಸ್ತರಿಸುತ್ತಿರುವ ಆರ್ಥಿಕತೆಗೆ ಅನುಗುಣವಾಗಿ ಹೆಚ್ಚುತ್ತಿರುವ ನಗದುಹಣದ ಬೇಡಿಕೆಯನ್ನು ಪೂರೈಸಲು ಎಟಿಎಂ ಯಂತ್ರಗಳ ಸಂಖ್ಯೆ ಸಾಕಷ್ಟಿಲ್ಲ ಎಂದೂ ಸಮಿತಿಯು ಕಳವಳ ವ್ಯಕ್ತಪಡಿಸಿದೆ.