ಸಿಂಹಾಸನ ತ್ಯಜಿಸಿದ ಮಲೇಶ್ಯ ದೊರೆ: ಮಾಸ್ಕೊ ಸುಂದರಿ ಜೊತೆ ವಿವಾಹ?

ಕೌಲಾಲಂಪುರ,ಜ.6: ರಶ್ಯದ ಮಾಜಿ ಸೌಂದರ್ಯರಾಣಿಯನ್ನು ವಿವಾಹವಾಗಿದ್ದಾರೆಂಬ ವದಂತಿಗಳ ನಡುವೆ, ಮಲೇಶ್ಯದ ದೊರೆ ಸುಲ್ತಾನ್ ಐದನೆ ಮುಹಮ್ಮದ್ ಅವರು ಪದತ್ಯಾಗ ಮಾಡಿದ್ದಾರೆಂದು ಆರಮನೆಯ ಅಧಿಕಾರಿಗಳು ರವಿವಾರ ಬಹಿರಂಗಪಡಿಸಿದ್ದಾರೆ.
ಸುಲ್ತಾನ್ ಮುಹಮ್ಮದ್ ಅವರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಮಲೇಶ್ಯವು 1957ರಲ್ಲಿ ಬ್ರಿಟನ್ ನಿಂದ ಸ್ವಾತಂತ್ರವನ್ನು ಪಡೆದ ಬಳಿಕ ಸಿಂಹಾಸನವನ್ನು ತ್ಯಜಿಸಿದ ಮೊದಲ ಮಲೇಶ್ಯದ ದೊರೆಯಾಗಿದ್ದಾರೆ. ಸುಲ್ತಾನ್ ಮುಹಮ್ಮದ್ ಅವರು ರಶ್ಯದ ಮಾಜಿ ಮಿಸ್ ಮಾಸ್ಕೊ ಅವರನ್ನು ವಿವಾಹವಾಗಿದ್ದಾರೆಂಬ ವರದಿಗಳು ಆನ್‌ಲೈನ್‌ನಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದವಾದರೂ, ಮಲೇಶ್ಯದ ಅರಮನೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಸುಲ್ತಾನ್ ಮುಹಮ್ಮದ್ ಅವರನ್ನು ಅರಸುಪಟ್ಟದಲ್ಲಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕಳೆದ ವಾರ ರಾಜಕುಟುಂಬದ ಪ್ರಮುಖ ಸದಸ್ಯರು ವಿಶೇಷ ಸಭೆಯನ್ನು ಏರ್ಪಡಿಸಿದ್ದರೆನ್ನಲಾಗಿದೆ.ಮಲೇಶ್ಯವು ಸಾಂವಿಧಾನಿಕ ಅರಸೊತ್ತಿಗೆಯನ್ನು ಹೊಂದಿದೆ. ಆ ದೇಶದಲ್ಲಿ ಅರಸೊತ್ತಿಗೆ ಸಿಂಹಾಸನವು ಪ್ರತಿ ಐದು ವರ್ಷಗಳಿಗೊಮ್ಮೆ, ಮಲೇಶ್ಯದ ಐದು ರಾಜ್ಯಗಳ ರಾಜರುಗಳ ನಡುವೆ ವರ್ಗಾವಣೆಗೊಳ್ಲುತ್ತದೆ.





