ಪಾಕಿಸ್ತಾನದ ವಿರುದ್ಧ ದ. ಆಫ್ರಿಕಕ್ಕೆ ಸರಣಿ ಗೆಲುವು

ದ್ವಿತೀಯ ಟೆಸ್ಟ್: 9 ವಿಕೆಟ್‌ಗಳ ಜಯ
ಕೇಪ್‌ಟೌನ್, ಜ.6: ಎರಡನೇ ಇನಿಂಗ್ಸ್ ನಲ್ಲಿ ಗೆಲುವಿಗೆ ಕೇವಲ 41 ರನ್‌ಗಳ ಗುರಿ ಪಡೆದಿದ್ದ ದ.ಆಫ್ರಿಕ ತಂಡ ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್ ನಲ್ಲಿ ರವಿವಾರ 9 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ.
ಆರಂಭದಲ್ಲಿ ಪಾಕಿಸ್ತಾನ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 177ಕ್ಕೆ ಆಲೌಟ್ ಮಾಡಿದ್ದ ಹರಿಣ ಪಡೆ, ತನ್ನ ಪ್ರಥಮ ಇನಿಂಗ್ಸ್ ನಲ್ಲಿ 431 ರನ್‌ಗಳ ಬೃಹತ್ ಮೊತ್ತ ಜಮೆ ಮಾಡಿತ್ತು. ಆ ಮೂಲಕ 254 ರನ್‌ಗಳ ಭಾರೀ ಮುನ್ನಡೆ ಪಡೆದಿತ್ತು. ಆ ಬಳಿಕ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ ಮೂರನೇ ದಿನದಾಟವಾದ ಶನಿವಾರ ಡೇಲ್ ಸ್ಟೇಯ್ನಾ(85ಕ್ಕೆ4) ಹಾಗೂ ಕಾಗಿಸೊ ರಬಾಡ(61ಕ್ಕೆ4) ಅವರ ವೇಗದ ಬೌಲಿಂಗ್ ದಾಳಿಗೆ ಪರದಾಡಿತು. ಶಾನ್ ಮಸೂದ್(61) ಹಾಗೂ ಅಸದ್ ಶಫೀಕ್(88) ಪಾಕಿಸ್ತಾನದ ಇನಿಂಗ್ಸ್‌ಗೆ ಜೀವ ತುಂಬಿದರು. ಈ ಜೋಡಿ ಮೂರನೇ ವಿಕೆಟ್‌ಗೆ 140 ರನ್ ಜಮಾ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಬಾಬರ್ ಅಝಮ್(72) ಅಮೋಘ ಆಟವಾಡಿದರು. ಆದರೆ ಬಾಬರ್‌ಗೆ ಇನ್ನೊಂದು ಕಡೆಯಿಂದ ಸೂಕ್ತ ಬೆಂಬಲ ದೊರೆಯಲಿಲ್ಲ. ಅಂತಿಮವಾಗಿ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 294ರನ್‌ಗೆ ಗಂಟುಮೂಟೆ ಕಟ್ಟಿತು.
ದ.ಆಫ್ರಿಕದ ಗೆಲುವಿಗೆ ಪಾಕಿಸ್ತಾನದಿಂದ ದೊರೆತದ್ದು ಕೇವಲ 40 ರನ್‌ಗಳ ಗುರಿ.
ದ. ಆಫ್ರಿಕದ ಎರಡನೇ ಇನಿಂಗ್ಸ್‌ನಲ್ಲಿ ಗಾಯಗೊಂಡಿದ್ದ ಏಡನ್ ಮಾರ್ಕರಮ್ ಬದಲಿಗೆ ಇನಿಂಗ್ಸ್ ಆರಂಭಿಸಿದ ಥೆನಿಸ್ ಡಿ ಬ್ರೂನ್ 4 ರನ್ ಗಳಿಸಿ ಮುಹಮ್ಮದ್ ಅಬ್ಬಾಸ್‌ಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ಹಾಶಿಮ್ ಅಮ್ಲ 2 ರನ್ ಗಳಿಸಿದ್ದಾಗ ಮುಹಮ್ಮದ್ ಅಮಿರ್ ಎಸೆತದಲ್ಲಿ ಗಾಯಗೊಂಡು ನಿವೃತ್ತಿ ಪಡೆದರು. ಡೀನ್ ಎಲ್ಗರ್(24)ಹಾಗೂ ನಾಯಕ ಫಾಫ್ ಡು ಪ್ಲೆಸಿಸ್(3) ಸರಾಗವಾಗಿ ದ.ಆಫ್ರಿಕವನ್ನು ಗೆಲುವಿನ ಗುರಿಗೆ ತಲುಪಿಸಿದರು. ಈ ನಡುವೆ ಪಾಕಿಸ್ತಾನ 10 ಇತರ ರನ್‌ಗಳನ್ನು ನೀಡಿತು.







