ಮೀನುಗಾರರಿಂದ ಬೃಹತ್ ರ್‍ಯಾಲಿ, ಧರಣಿ
ಕಳೆದ 23 ದಿನಗಳಿಂದ ನಾಪತ್ತೆಯಾಗಿರುವ ಏಳು ಮೀನುಗಾರರನ್ನು ಶೀಘ್ರ ಹುಡುಕಿ ತರುವಂತೆ ಆಗ್ರಹಿಸಿ ಕರಾವಳಿಯ ಮೂರು ಜಿಲ್ಲೆಗಳ ಸಹಸ್ರಾರು ಸಂಖ್ಯೆಯ ಮೀನುಗಾರರು ರವಿವಾರ ಉಡುಪಿಯ ಅಂಬಲಪಾಡಿ ಜಂಕ್ಷನ್‌ನಲ್ಲಿ ರಸ್ತೆ ತಡೆದು ಧರಣಿ ನಡೆಸಿದರು. ಮೀನುಗಾರರ ಆಕ್ರೋಶಕ್ಕೆ ಸುಮಾರು ನಾಲ್ಕು ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಮೂರು ತಾಸುಗಳ ಕಾಲ ಸ್ಥಗಿತಗೊಂಡಿತು. ಧರಣಿಯ ಪ್ರಯುಕ್ತ ಮಂಗಳೂರು, ಮಲ್ಪೆ, ಕಾರವಾರ, ಗಂಗೊಳ್ಳಿ, ಭಟ್ಕಳಗಳಲ್ಲಿ ಮೀನುಗಾರಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಬೆಳಗ್ಗೆ ಮಲ್ಪೆ ಬಂದರಿನಲ್ಲಿ ಜಮಾಯಿಸಿದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರ ಮುಖಂಡರು, ಜನಪ್ರತಿನಿಧಿಗಳು, ಮಹಿಳೆಯರು ಸೇರಿದಂತೆ 25 ಸಾವಿರಕ್ಕೂ ಅಧಿಕ ಮಂದಿ ಏಳು ಕಿ.ಮೀ. ದೂರದ ಅಂಬಲಪಾಡಿ ಜಂಕ್ಷನ್‌ವರೆಗೆ ಪಾದಯಾತ್ರೆ ನಡೆಸಿದರು. ಮಲ್ಪೆ ಬಂದರಿನಲ್ಲಿ ಮೀನುಗಾರ ಮುಖಂಡ ಜಿ.ಶಂಕರ್ ತೆಂಗಿನಕಾಯಿ ಒಡೆಯುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಕಲ್ಮಾಡಿ, ಆದಿಉಡುಪಿ ಮಾರ್ಗವಾಗಿ ಕರಾವಳಿ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಆಗಮಿಸಿದ ಮೆರವಣಿಗೆಯು ಅಲ್ಲಿಂದ ಶಾರದಾ ಇಂಟರ್‌ನ್ಯಾಶನಲ್ ಹೊಟೇಲ್ ಎದುರಿನಿಂದ ಅಂಡರ್‌ಪಾಸ್‌ನ ಮೇಲ್ಭಾಗ ಮಾರ್ಗವಾಗಿ ಅಂಬಲಪಾಡಿ ಜಂಕ್ಷನ್‌ವರೆಗೆ ಸಾಗಿಬಂತು.





