ಡಿಆರ್‌ಎಸ್ ಬಳಸದ ಆಟಗಾರರ ನಿರ್ಧಾರಕ್ಕೆ ಪಾಂಟಿಂಗ್ ಬೇಸರ
ಸಿಡ್ನಿ, ಜ.6: ಭಾರತ ವಿರುದ್ಧ ನಾಲ್ಕನೇ ಟೆಸ್ಟ್‌ನ 4ನೇ ದಿನವಾದ ರವಿವಾರ ಎಲ್ಬಿಡಬ್ಲು ತೀರ್ಪನ್ನು ಪ್ರಶ್ನಿಸದ ನಥಾನ್ ಲಿಯೊನ್ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಈಗಿನ ತಂಡದ ಮನಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕುಲ್‌ದೀಪ್ ಯಾದವ್ ಎಸೆತ ಲಿಯೊನ್ ಪ್ಯಾಡ್‌ಗೆ ಅಪ್ಪಳಿಸಿದ ಕಾರಣ ಅಂಪೈರ್ ಎಲ್ಬಿಡಬ್ಲು ತೀರ್ಪು ನೀಡಿದ್ದರು. ಆಗ ಲಿಯೊನ್ ಅವರು ಮತ್ತೊಂದು ತುದಿಯಲ್ಲಿದ್ದ ಮಿಚೆಲ್ ಸ್ಟಾರ್ಕ್ ಬಳಿ ತಾನು ಅಂಪೈರ್ ತೀರ್ಪು ಪರಾಮರ್ಶೆಗೆ(ಡಿಆರ್‌ಎಸ್) ಮೊರೆ ಹೋಗಬೇಕೇ? ಎಂದು ಕೇಳಿದ್ದರು. ಆದರೆ, ತಂಡದ ಕೈಯ್ಯಲ್ಲಿ ಎರಡು ಡಿಆರ್‌ಎಸ್ ಬಾಕಿ ಇದ್ದರೂ ಇಬ್ಬರೂ ಆಟಗಾರರು ಅಂಪೈರ್ ತೀರ್ಪನ್ನು ಪ್ರಶ್ನಿಸದೇ ಇರಲು ನಿರ್ಧರಿಸಿದ್ದರು. ‘‘ಲಿಯೊನ್ ಅವರ ಔಟಾದ ರೀತಿಯು ಈ ಕ್ಷಣದಲ್ಲಿ ಆಸ್ಟ್ರೇಲಿಯದ ಮನಸ್ಥಿತಿಯನ್ನು ಹೇಳುತ್ತಿತ್ತು. ಆಸ್ಟ್ರೇಲಿಯಕ್ಕೆ ಎರಡು ಡಿಆರ್‌ಎಸ್ ಬಾಕಿಯಿತ್ತು. ಅಂಪೈರ್ ತೀರ್ಪಿನ ಬಗ್ಗೆ ಸಂಶಯ ಬಂದಾಗ ಅದನ್ನು ಬಳಸಬಹುದಿತ್ತು’’ ಎಂದು ಚಾನಲ್ ಸೆವೆನ್‌ಗೆ ಪಾಂಟಿಂಗ್ ತಿಳಿಸಿದರು. ಲಿಯೊನ್‌ಗೆ ಸರಿಯಾದ ಸಲಹೆ ನೀಡದ ಹಿರಿಯ ವೇಗದ ಬೌಲರ್ ಸ್ಟಾರ್ಕ್‌ರನ್ನು ಮೂರು ಬಾರಿಯ ವಿಶ್ವಕಪ್ ಚಾಂಪಿಯನ್ ತಂಡದ ನಾಯಕ ಪಾಂಟಿಂಗ್ ತರಾಟೆಗೆ ತೆಗೆದುಕೊಂಡರು.





