ಜ.31 ರೊಳಗೆ ಆಹಾರ ವಹಿವಾಟುದಾರರ ನೋಂದಣಿ-ಪರವಾನಿಗೆ ಕಡ್ಡಾಯ
ಬೆಂಗಳೂರು, ಜ.7: ರಸ್ತೆ ಬದಿ ಆಹಾರ ವ್ಯಾಪಾರಿಗಳು, ಗೃಹ ಆಧಾರಿತ ಕ್ಯಾಂಟೀನ್‌ಗಳು, ಮಾಂಸ ಮಾರಾಟಗಾರರು ಸೇರಿದಂತೆ ಆಹಾರ ವಹಿವಾಟುದಾರರು ಕಡ್ಡಾಯವಾಗಿ ಜ.31 ರೊಳಗೆ ನೋಂದಣಿ ಹಾಗೂ ಪರವಾನಿಗೆ ಪಡೆಯಬೇಕೆಂದು ನಗರದ ಅಂಕಿತಾಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ವಹಿವಾಟು ವಾರ್ಷಿಕ ರೂ.12ಲಕ್ಷಕ್ಕಿಂತ ಕಡಿಮೆಯಿರುವ ವಹಿವಾಟುದಾರರು ನೋಂದಣಿ ಮಾಡಿಸಬೇಕು ಹಾಗೂ ಆಹಾರ ವಹಿವಾಟು ವಾರ್ಷಿಕ ರೂ.12ಲಕ್ಷಕ್ಕಿಂತ ಅಥವಾ ಅದಕ್ಕಿಂತ ಅಧಿಕವಿರುವ ವಹಿವಾಟುದಾರರು ಪರವಾನಿಗೆ ಪಡೆಯಬೇಕು ಎಂದು ಮಾಹಿತಿ ನೀಡಿದರು.
ಆಹಾರ ವಸ್ತಗಳ ತಯಾರಕರು ಸಂಸ್ಕರಣೆ, ಸಾಗಣೆ, ವಿತರಣೆ ಹಾಗೂ ಮಾರಾಟದಲ್ಲಿ ನಿರತರಾಗಿರುವವರು ನೋಂದಣಿ ಹಾಗೂ ಪರವಾನಿಗೆ ಪಡೆದಿರಬೇಕು. ಇಲ್ಲವಾದಲ್ಲಿ ವಸ್ತುಗಳ ವಹಿವಾಟು ನಡೆಸುವಂತಿಲ್ಲ. ಇದರ ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ಸೆರೆವಾಸ ಮತ್ತು 5 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಪ್ಲಾಸ್ಟಿಕ್ ಹಾಳೆ ನಿಷೇಧ: ಹೊಟೇಲ್ ಹಾಗೂ ಬೀದಿ ವ್ಯಾಪಾರಿಗಳು ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಪ್ಲಾಸ್ಟಿಕ್ ಹಾಳೆಗಳ ಬಳಕೆ ಹಾಗೂ ತಿಂಡಿ- ತಿನಿಸುಗಳನ್ನು ದಿನಪತ್ರಿಕೆಯಲ್ಲಿ ಕಟ್ಟಿಕೊಡುವುದರಿಂದ, ಮುದ್ರಣಕ್ಕೆ ಬಳಸುವ ಇಂಕ್ ಆಹಾರದಲ್ಲಿ ಬೆರೆತು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹೀಗಾಗಿ, ಅವುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.
ಆಹಾರ ಉತ್ಪಾದಕರು, ಹೊಟೇಲ್, ಬೇಕರಿ, ವಿತರಕರು, ಕ್ಲಬ್, ಬಾರ್ ಹಾಗೂ ರೆಸ್ಟೋರೆಂಟ್, ಕ್ಯಾಂಟೀನ್, ಕಲ್ಯಾಣ ಮಂಟಪ, ನ್ಯಾಯ ಬೆಲೆ ಅಂಗಡಿಗಳು, ಸರಕಾರಿ ಹಾಗೂ ಸರಕಾರೇತರ ವಸತಿ ನಿಲಯಗಳು, ಧಾರ್ಮಿಕ ಸ್ಥಳಗಳು, ಕ್ಯಾಂಟರಿಂಗ್ ಶಾಲಾ-ಕಾಲೇಜುಗಳ ಕ್ಯಾಂಟೀನ್‌ಗಳು ತಂಪು ಪಾನೀಯ ತಯಾರಿಕ ಘಟಕಗಳು ರಸ್ತೆ ಬದಿ ಆಹಾರ ವ್ಯಾಪಾರಿಗಳು, ಗೃಹ ಆಧಾರಿತ ಕ್ಯಾಂಟೀನ್‌ಗಳು ಸೇರಿದಂತೆ ಎಲ್ಲ ಆಹಾರ ವಹಿವಾಟುದಾರರು ಕಡ್ಡಾಯ ಪರವಾನಿಗೆ ಹಾಗೂ ನೋಂದಣಿ ಪಡೆಯಬೇಕು ಎಂದರು.
ಆಹಾರ ಮಳಿಗೆಗಳು ಹಾಗೂ ಆಹಾರ ಪದಾರ್ಥಗಳ ದೂರುಗಳಿಗೆ ಈ ಕೆಳಗೆ ನಮೂದಿಸಿರುವ ವಾಟ್ಸ್ ಆ್ಯಪ್ ಮೊಬೈಲ್ ಸಂಖ್ಯೆ: 94821 96639 ಕ್ಕೆ ಫೋಟೋ ಅಥವಾ ವೀಡಿಯೋಗಳನ್ನು ಕಳುಹಿಸಬಹುದು ಎಂದು ಅಂಕಿತಾಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.
ವಹಿವಾಟುದಾರರು ಅನುಸರಿಸಬೇಕಾದ ಅಂಶ:
* ಕಾಯ್ದೆಗೆ ಅನುಗುಣವಾಗಿ ನೋಂದಣಿ ಹಾಗೂ ಪರವಾನಿಗೆ ಮಾಡಿಸಬೇಕು.
* ನೈರ್ಮಲ್ಯ ಕಾಯ್ದುಕೊಳ್ಳಬೇಕು.
* ತ್ಯಾಜ್ಯ ವಸ್ತುಗಳ ಸಂಗ್ರಹ ಹಾಗೂ ವಿಲೇವಾರಿಗೆ ವಿಶೇಷ ಗಮನ.
* ಗ್ರಾಹಕರ ತಿಳುವಳಿಕೆ ಅಗತ್ಯವಾದ ಮಾಹಿತಿಯನ್ನು ಮುದ್ರಿಸಬೇಕು.
* ಸುರಕ್ಷಿತ ನೀರನ್ನು ನೀಡಲು ಹೆಚ್ಚಿನ ಆದ್ಯತೆ ನೀಡಬೇಕು.
* ಆಹಾರ ಘಟಕದಲ್ಲಿರುವವರು ದೈಹಿಕ ಆರೋಗ್ಯ ಹಾಗೂ ಸ್ವಚ್ಛತೆಗೆ ಗಮನಹರಿಸಬೇಕು.







