ಶೂನ್ಯ ಬಡ್ಡಿದರದಲ್ಲಿ ಸಾಲಕ್ಕಾಗಿ ಸರಕಾರಕ್ಕೆ ಒತ್ತಡ: ರಾಜೇಂದ್ರ ಕುಮಾರ್

ಉಡುಪಿ, ಡಿ.7: ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಿ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಪ್ರಯತ್ನಿಸಲಾಗುವುದು. ಸ್ವಸಹಾಯ ಸಂಘಗಳ ಎಲ್ಲ ಬೇಡಿಕೆಗಳನ್ನು ಪ್ರಾಥಮಿಕ ಸಹಕಾರಿ ಪತ್ತಿನ ಅಧ್ಯಕ್ಷರುಗಳ ಮೂಲಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಹಕಾರ ಮಂತ್ರಿಗಳಿಗೆ ಸಲ್ಲಿಸ ಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಸಾಬರಕಟ್ಟೆಯ ಕಾತ್ಯಾಯಿನಿ ಕಟ್ಟಡದ ಪ್ರಥಮ ಮಹಡಿಗೆ ಸ್ಥಳಾಂತರ ಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಾಬರಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಸರಕಾರದ ಬಡವರ ಬಂಧು ಯೋಜನೆ ಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಶೇ.70ರಷ್ಟು ಮಹಿಳೆಯರು ಹಾಗೂ ಶೇ.70ರಷ್ಟು ಬಿಪಿಎಲ್ ಕಾರ್ಡ್ ಹೊಂದಿರುವ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಲು ನಾವು ಬದ್ಧರಾಗಿದ್ದೇವೆ. ಅದೇ ರೀತಿ ಮಿಶ್ರ ಗುಂಪುಗಳಿಗೆ ಶೇ.4ರ ಬಡ್ಡಿದರದಲ್ಲಿಯೂ ನಾವು ಸಾಲ ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಸಹಕಾರದೊಂದಿಗೆ ಮಹಿಳೆಯರಂತೆ ಪುರುಷರಿಗೂ ಸಮವಸ್ತ್ರ ನೀಡಲು ಬದ್ಧರಾಗಿದ್ದೇವೆ. ನಮ್ಮ ಜನ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕಾಯುವುದನ್ನು ತಪ್ಪಿಸಲು ನಮ್ಮ ಬ್ಯಾಂಕಿನಿಂದ ಕೃಷಿಕರಿಗೆ ಮಾತ್ರವಲ್ಲ ಕೃಷಿಕರೇತರು, ವ್ಯಾಪಾರಸ್ಥರಿಗೂ ಸಾಲ ಕೊಡುವ ಕೆಲಸ ಮಾಡ ಲಾಗುವುದು. ಕೃಷಿ ಮರುಪಾವತಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯು ಇಡೀ ದೇಶದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಹೊರ ರಾಜ್ಯದವರು ಮಹಿಳೆಯರಿಗೆ ಆಮಿಷವೊಡ್ಡಿ ಕೈ ಬಡ್ಡಿ ಸಾಲ ನೀಡಿ ಲೂಟಿ ಮಾಡುತ್ತಿದ್ದಾರೆ. ಇದನ್ನು ದೂರ ಮಾಡಲು ಮಹಿಳೆಯರಿಗೆ ಸಾಲ ಕೊಡಲು ನಾವು ಬದ್ಧರಿದ್ದೇವೆ. ಬಡವರ ಬಂಧು ಯೋಜನೆಯು ಅಗತ್ಯ ಇದ್ದ ವರಿಗೆ ಸಿಗಬೇಕು. ಸಾಲ ಪಡೆದವರು ಅಸಲು ಪಾವತಿಸಬೇಕು. ಬಡ್ಡಿ ಮಾತ್ರ ಸರಕಾರ ಪಾವತಿಸುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್ ಮಾತನಾಡಿ, ಬಡವರ ಬಂಧು ಯೋಜನೆಯನ್ನು ಸದ್ಯ ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರಸಭೆಯ ವ್ಯಾಪ್ತಿಗೆ ಒಳಪಟ್ಟ ಐದು ಡಿಸಿಸಿ ಬ್ಯಾಂಕ್‌ಗಳಲ್ಲಿ ಮಾತ್ರ ಜಾರಿಗೆ ತರಲಾಗಿದೆ. ಮುಂದೆ ಜಿಲ್ಲೆಯ ಎಲ್ಲ ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೂ ಈ ಯೋಜನೆ ಜಾರಿಗೆ ಬರಲಿದೆ ಎಂದರು.
ಬಿಪಿಎಲ್ ಕಾರ್ಡ್, ನಗರಸಭೆಯ ಬೀದಿ ವ್ಯಾಪಾರದ ಕಾರ್ಡ್ ಹೊಂದಿದ ವರಿಗೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವವರಿಗೆ ಈ ಯೋಜನೆಯಡಿ 2 ರಿಂದ 10ಸಾವಿರ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುು ಎಂದು ಅವರು ಮಾಹಿತಿ ನೀಡಿದರು.
ಸ್ಥಳಾಂತರ ಶಾಖೆಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಳ್ಳಾಲ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲಕ ಅಶೋಕ್ ಪ್ರಭು, ಶಾಖಾ ವ್ಯವಸ್ಥಾಪಕ ಜಯರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನವೋದಯ ಹೊಸ ಗುಂಪು ಗಳನ್ನು ಉದ್ಘಾಟಿಸಲಾಯಿತು. ಫಲಾನುಭವಿಗಳಿಗೆ ಚೆತನ್ಯ ವಿಮಾ ಚೆಕ್ ವಿತರಿಸಲಾಯಿತು.
ವೇದಿಕೆಯಲ್ಲಿ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಶ್ರೀಧರ್ ಬೆಳ್ವೆ, ಸತೀಶ್ ಶೆಟ್ಟಿ, ನಾರಾಯಣ ಬಳ್ಳಾಲ್, ಶಾಂತಾರಾಮ್ ಶೆಟ್ಟಿ, ತಿಮ್ಮಪ್ಪ ಹೆಗ್ಡೆ, ತಿಮ್ಮ ಪೂಜಾರಿ, ಸದಾಶಿವ ಕರ್ಕೇರ, ಸುಧೀರ್ ಕುಮಾರ್ ವೈ, ಗಂಗಾಧರ ಶೆಟ್ಟಿ, ಮಂಜಯ್ಯ ಶೆಟ್ಟಿ, ಬ್ಯಾಂಕಿನ ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ, ರಾಜೇಶ್ ರಾವ್, ಎನ್.ರಮೇಶ್ ಶೆಟ್ಟಿ, ಪ್ರಭಾರ ಮುಖ್ಯಕಾರ್ಯನಿರ್ವ ಹಣಾಧಿಕಾರಿ ರವೀಂದ್ರ ಬಿ. ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ರಾಜು ಪೂಜಾರಿ ವಂದಿಸಿದರು. ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಡವರ ಬಂಧು ಯೋಜನೆ ವಿಸ್ತರಿಸಿ
ರಾಜ್ಯ ಸರಕಾರದ ಬಡವರ ಬಂಧು ಯೋಜನೆಯಿಂದ ಕೈ ಬಡ್ಡಿ ಸಾಲದಿಂದ ತತ್ತರಿಸಿ ಹೋಗಿರುವ ವ್ಯಾಪಾರಸ್ಥರ ಬದುಕಿನಲ್ಲಿ ಬದಲಾವಣೆಗಳಾಗಬಹುದು. ಆದುದರಿಂದ ಈ ಯೋಜನೆಯನ್ನು ನಗರ ಪ್ರದೇಶಕ್ಕೆ ಸೀಮಿತಗೊಳಿಸದೆ ವಿಸ್ತರಿಸ ಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ಸಮಾಜದಲ್ಲಿರುವ ಇನ್ನು ಉಳಿದಿರುವ ಬಡವರ ಬದುಕಿನಲ್ಲಿ ಪ್ರಗತಿ ಸಾಧಿ ಸಲು ಸಹಕಾರಿಯಾಗುವ ಈ ಯೋಜನೆ ಸ್ವಾಗರ್ತಾಹ. ಈ ಯೋಜನೆಯು ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕು. ಡಿಸಿಸಿ ಬ್ಯಾಂಕ್ ಅನುಷ್ಠಾನ ಗೊಳಿಸುವುದರಿಂದ ಈ ಯೋಜನೆ ಯಶಸ್ವಿಯಾಗುವ ವಿಶ್ವಾಸ ಇದೆ ಎಂದು ಅವರು ಹೇಳಿದರು.







