ಎಚ್‌ಎಎಲ್‌ಗೆ ಹಣ ಪಾವತಿಸದ ಸರಕಾರದ ಪ್ರಕಾರ ‘ಮೇಕ್ ಇನ್ ಇಂಡಿಯಾ’ ಎಂದರೇನು?
ಕಾಂಗ್ರೆಸ್ ಪ್ರಶ್ನೆ

ಹೊಸದಿಲ್ಲಿ, ಜ.7: ಹಿಂದುಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) ಎದುರಿಸುತ್ತಿರುವ ಹಣಕಾಸಿನ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಎಚ್‌ಎಲ್ ಪೂರೈಸಿದ ಉತ್ಪನ್ನಗಳಿಗೆ ಸರಕಾರ ಹಣ ನೀಡಿಲ್ಲ. ಆದರೆ ಡಸಾಲ್ಟ್ ನಂತಹ ವಿದೇಶಿ ಸಂಸ್ಥೆಗೆ ಮುಂಗಡ ಹಣ ಪಾವತಿಸಿದೆ ಎಂದು ಆರೋಪಿಸಿದೆ.
ಪೂರೈಸಿರುವ ವಸ್ತುಗಳಿಗೂ ಎಚ್‌ಎಎಲ್‌ಗೆ ಸರಕಾರ ಹಣ ಪಾವತಿಸಿಲ್ಲ. ಇದರಿಂದ ಸಂಸ್ಥೆ ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ್ದು, ಉದ್ಯೋಗಿಗಳಿಗೆ ವೇತನ ಪಾವತಿಸಲೂ ಸಾಲ ಪಡೆಯಬೇಕಾದ ಸ್ಥಿತಿಯಿದೆ. ‘ಮೇಕ್ ಇನ್ ಇಂಡಿಯಾ’ ಎಂದರೆ ಇದೇ ಏನು ಎಂದು ಹಿರಿಯ ಮುಖಂಡ ಅಹ್ಮದ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಫ್ರಾನ್ಸ್‌ನೊಂದಿಗಿನ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಿಂದ ಸರಕಾರ ಎಚ್‌ಎಎಲ್ ಅನ್ನು ಕೈಬಿಟ್ಟು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಗೆ ಅವಕಾಶ ನೀಡಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ.
ಆರೋಪವನ್ನು ನಿರಾಕರಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ, ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಎಚ್‌ಎಎಲ್ ಅನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಆದರೆ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಎಚ್‌ಎಎಲ್‌ಗೆ 1 ಲಕ್ಷ ಕೋಟಿ ರೂ. ಕಾರ್ಯಾದೇಶ (ಆರ್ಡರ್) ಲಭ್ಯವಾಗಿದೆ ಎಂದು ಹೇಳಿದೆ.







