ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅಂಗೀಕಾರ
ಬಾಂಗ್ಲಾ, ಅಫ್ಘಾನ್, ಪಾಕಿಸ್ತಾನದ ಮುಸ್ಲಿಮೇತರರಿಗೆ ಪೌರತ್ವ

ಹೊಸದಿಲ್ಲಿ, ಜ. 7: ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವಂತೆ ಕೋರಿದ ಪೌರತ್ವ ತಿದ್ದುಪಡಿ ಮಸೂದೆಯ ಮರು ಕರಡಿಗೆ ಕೇಂದ್ರ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ನೀಡಲಾಯಿತು. ಈ ಮಸೂದೆ ಮಂಗಳವಾರ ಲೋಕಸಭೆಯ ಮುಂದೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016ರಲ್ಲಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಮಂಡಿಸಲಾಗಿದ್ದ ಈ ಮಸೂದೆಯ ಬಗ್ಗೆ ಜಂಟಿ ಸಂಸದೀಯ ಸಮಿತಿ ಪರಿಶೀಲಿಸಿ ಲೋಕಸಭೆಯಲ್ಲಿ ವರದಿ ಮಂಡಿಸಿದ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳ ದೊಡ್ಡ ಸಂಖ್ಯೆಯ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
1971ರ ಬಳಿಕ ರಾಜ್ಯ ಪ್ರವೇಶಿಸಿದ ವಿದೇಶಿ ಪ್ರಜೆಗಳು ಯಾವುದೇ ಧರ್ಮವಾಗಿದ್ದರೂ ಗಡಿಪಾರು ಮಾಡಬೇಕು ಎಂಬ 1985ರ ಅಸ್ಸಾಂ ಒಪ್ಪಂದವನ್ನು ಇದು ನಿರಸನಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಸೂಕ್ತ ದಾಖಲೆಗಳನ್ನು ಹೊಂದಿರದೇ ಇದ್ದರೂ 12 ವರ್ಷದ ಬದಲು 6 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶದ ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಭಾರತೀಯ ನಾಗರಿಕತ್ವ ನೀಡುವ ನಾಗರಿಕತ್ವ ಕಾಯ್ದೆ 1955ಕ್ಕೆ ತಿದ್ದುಪಡಿ ತರುವಂತೆ ಈ ಮಸೂದೆ ಕೋರಿತ್ತು. ಇದು 2014ರಲ್ಲಿ ಬಿಜೆಪಿ ನೀಡಿದ ಚುನಾವಣಾ ಭರವಸೆಯಾಗಿತ್ತು.
ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡುವ ಕೇಂದ್ರ ಸರಕಾರದ ನಡೆಯ ವಿರುದ್ಧ ಈಶಾನ್ಯದ 8 ವಿದ್ಯಾರ್ಥಿ ಸಂಘಟನೆಗಳಲ್ಲದೆ ಅಸ್ಸಾಂನ 40 ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳು ಮಂಗಳವಾರ 11 ಗಂಟೆಗಳ ಬಂದ್ ಘೋಷಿಸಿದೆ.







