ಜ.8: ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ದ.ಕ. ಜಿಲ್ಲಾ ಬಂದ್ ಸಾಧ್ಯತೆ
ಮಂಗಳೂರು, ಜ.7: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳಾದ ಇಂಟಕ್, ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಎಐಯುಟಿಯುಸಿ, ಯುಟಿಯುಸಿ, ಬ್ಯಾಂಕ್, ಇನ್ಶೂರೆನ್ಸ್, ಪೋಸ್ಟ್, ಆರ್‌ಎಂಎಸ್, ರೈಲ್ವೆ, ಬಿಎಸ್ಸೆನ್ನೆಲ್, ಸರಕಾರಿ ನೌಕರರು, ಖಾಸಗಿ ಸಾರಿಗೆ ನೌಕರರು, ಬಸ್, ಆಟೊ ಚಾಲಕರ ಸಹಿತ ಕಾರ್ಮಿಕ ವಲಯವು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಲು ನಿರ್ಧರಿಸಿದೆ. ಅದರಂತೆ ಜ.8ರಂದು ದ.ಕ.ಜಿಲ್ಲೆಯು ಭಾಗಶಃ ಬಂದ್ ಆಗುವ ಸಾಧ್ಯತೆ ಇದೆ.
ಜಿಲ್ಲೆಯ ಬಹುತೇಕ ರೈತ ಸಂಘಟನೆಗಳು, ಬೀದಿ ವ್ಯಾಪಾರಸ್ಥರ ಸಂಘ, ಸಿಪಿಎಂ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಾರಿಗೆ ನೌಕರರ ಅಖಿಲ ಭಾರತ ಫೆಡರೇಶನ್‌ಗಳು ಕೂಡ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡಿದೆಯಲ್ಲದೆ ಕೆಲವು ಸಂಘಟನೆಗಳು ಬೈಕ್ ಜಾಥಾ, ಹರತಾಳ ನಡೆಸಲು ನಿರ್ಧರಿಸಿವೆ. ಈಗಾಗಲೇ ಹಲವು ಸಂಘಟನೆಗಳು ಬಂದ್ ಬೆಂಬಲಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರೆ, ಇನ್ನು ಕೆಲವು ಸಂಘಟನೆಗಳು ಬಂದ್‌ನಿಂದ ದೂರ ಸರಿದಿವೆ. ಆದಾಗ್ಯೂ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಬಂದ್ ನಡೆಯಲಿದೆ.
ಕಾದು ನೋಡುವ ತಂತ್ರ: ಖಾಸಗಿ ಬಸ್ ಸೇವೆಯು ದ.ಕ.ಜಿಲ್ಲೆಯ ಜನರ ಜೀವನಾಡಿಯಾಗಿದೆ. ಖಾಸಗಿ ಬಸ್‌ಗಳು ಸೇವೆಯನ್ನು ಸ್ಥಗಿತಗೊಳಿಸಿದರೆ ಜಿಲ್ಲೆಯು ಸಂಪೂರ್ಣ ಬಂದ್ ಆದಂತೆ. ಅವಿಭಜಿತ ದ.ಕ.ಜಿಲ್ಲೆಯ ಸರ್ವಿಸ್ ಮತ್ತು ಎಕ್ಸ್‌ಪ್ರೆಸ್ ಬಸ್‌ಗಳನ್ನು ಒಳಗೊಂಡ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹೇಳುವಂತೆ ನಮ್ಮ ಬಳಿ ಯಾವ ಸಂಘಟನೆಯವರೂ ಕೂಡ ಬಂದ್‌ಗೆ ಬೆಂಬಲ ಕೇಳಲಿಲ್ಲ. ಹಾಗಾಗಿ ಎಂದಿನಂತೆ ಬಸ್ ಗಳನ್ನು ರಸ್ತೆಗೆ ಇಳಿಸುವಂತೆ ಸಿಬ್ಬಂದಿ ವರ್ಗಕ್ಕೆ ನಾವು ಸೂಚನೆ ನೀಡಿದ್ದೇವೆ. ಅಲ್ಲದೆ ಸಂಪೂರ್ಣ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೂ ಮನವಿ ಮಾಡಿದ್ದೇವೆ. ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾದರೆ ಎರಡೂ ಜಿಲ್ಲೆಗಳ 3 ಸಾವಿರಕ್ಕೂ ಅಧಿಕ ಬಸ್‌ಗಳು ಸಂಚರಿಸಲಿವೆ’ ಎಂದಿದ್ದಾರೆ.
ಖಾಸಗಿ ಸಿಟಿ ಬಸ್‌ಗಳನ್ನು ಒಳಗೊಂಡ ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಪ್ರತಿಕ್ರಿಯಿಸಿ ‘ಜ.8,9ರ ಸಾರ್ವತ್ರಿಕ ಮುಷ್ಕರದ ಬಗ್ಗೆ ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬಸ್ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾದರೆ ಎಂದಿನಂತೆ ಬಸ್ ಸಂಚರಿಸಲಿವೆ. ಇಲ್ಲದಿದ್ದರೆ ಬಸ್ ಸಂಚಾರ ಇರುವುದಿಲ್ಲ’ ಎನ್ನುತ್ತಾ ‘ಕಾದು ನೋಡುವ ತಂತ್ರ’ ಪ್ರಯೋಗಿಸಿದ್ದಾರೆ.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ದೀಪಕ್ ಕುಮಾರ್ ಮಾತನಾಡಿ ‘ಖಾಸಗಿ ಬಸ್ಸಿನವರು ಸಂಚರಿಸಿದರೆ ನಾವೂ ಕೂಡಾ ಬಸ್ ಸಂಚಾರ ನಡೆಸುವೆವು. ಇಲ್ಲದಿದ್ದರೆ ಓಡಾಟ ಕಷ್ಟ. ಕಿಡಿಗೇಡಿಗಳು ಅವಿತುಕೊಂಡು ಬಸ್ಸಿಗೆ ಕಲ್ಲೆಸೆದರೆ ಹಾನಿಗಿಂತಲೂ ಪ್ರಯಾಣಿಕರಿಗೆ ತೊಂದರೆಯಾದರೆ ಸಮಸ್ಯೆಯಾಗಲಿದೆ. ಹಾಗಾಗಿ ಪರಿಸ್ಥಿತಿ ಅವಲೋಕಿಸಿಕೊಂಡು ನಿರ್ಧರಿಸಲಾಗುವುದು’ ಎಂದಿದ್ದಾರೆ.
ನೈತಿಕ ಬೆಂಬಲ: ಕಾರ್ಮಿಕ ಸಂಘಟನೆಗಳ ಬಂದ್ ಕರೆಗೆ ನಮ್ಮ ನೈತಿಕ ಬೆಂಬಲವಿದೆ. ಆದರೆ ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಮತ್ತು ವ್ಯಾಪಾರ-ವಹಿವಾಟುಗಳ ಸ್ಥಗಿತದಿಂದ ಆರ್ಥಿಕ ಹೊರೆಯಾಗಲಿದೆಯೇ ವಿನಃ ಲಾಭವಾಗದು. ಹಾಗಾಗಿ ಕಂಕನಾಡಿ ಮಾರುಕಟ್ಟೆಯು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಕಂಕನಾಡಿ ಮಾರುಕಟ್ಟೆ ಸಂಘದ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ. ಮಂಗಳೂರು ನಗರ ಸಹಿತ ದ.ಕ.ಜಿಲ್ಲೆಯಲ್ಲಿ ಎಂದಿನಂತೆ ರಿಕ್ಷಾ ಓಡಾಟ ನಡೆಸಲಿದೆ ಎಂದು ದ.ಕ.ಜಿಲ್ಲಾ ಅಲ್ಪಸಂಖ್ಯಾತ ಆಟೊ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಅಲಿ ಹಸನ್ ಪ್ರತಿಕ್ರಿಯಿಸಿದ್ದಾರೆ.
ಪರೀಕ್ಷೆ ಮುಂದೂಡಿಕೆ: ಮಂಗಳೂರು ವಿವಿಯ ಪದವಿ ಪ್ರಾಕ್ಟಿಕಲ್ ಪರೀಕ್ಷೆಗಳು ಸೋಮವಾರದಿಂದ ಆರಂಭವಾಗಿವೆ. ಆದರೆ ಮಂಗಳವಾರ ಮತ್ತು ಬುಧವಾರದ ಬಂದ್ ಹಿನ್ನೆಲೆಯಲ್ಲಿ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಲಾಗಿದೆ ಎಂದು ಕುಲ ಸಚಿವರು (ಪರೀಕ್ಷಾಂಗ) ತಿಳಿಸಿದ್ದಾರೆ.
ಪಿಯು ಪೂರ್ವಸಿದ್ಧತಾ ಪರೀಕ್ಷೆ: ಜ.8 ಮತ್ತು 9ರಂದು ನಡೆಯಲಿರುವ ದ್ವಿತೀಯ ಪಿಯು ಪೂರ್ವಸಿದ್ಧತಾ ಪರೀಕ್ಷೆಯನ್ನು ಬಂದ್ ಕರೆಯ ಹಿನ್ನೆಲೆಯಲ್ಲಿ ಜ.12 ಮತ್ತು 14ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ದ.ಕ. ಜಿಲ್ಲಾ ರಿಕ್ಷಾ ಚಾಲಕರ ಸಂಘವು ಬಂದ್‌ಗೆ ಬೆಂಬಲ ಸೂಚಿಸಿದೆ. ಹಾಗಾಗಿ ನಗರದಲ್ಲಿ ರಿಕ್ಷಾಗಳು ರಸ್ತೆಗಿಳಿಯದು. ಇದರಿಂದ ಜನಸಾಮಾನ್ಯರಿಗೆ ಸ್ವಲ್ಪ ತೊಂದರೆಯಾಗಲಿದೆ.
ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯಿಸಿ ಮತ್ತು ಮೋದಿ ಸರಕಾರವು ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಯೋಜನೆ ಜಾರಿಗೊಳಿಸದ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘವೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ಇದರಿಂದ ತರಕಾರಿ, ಹಣ್ಣು ಹಂಪಲುಗಳ ಲಭ್ಯವಾಗದು.
ಬ್ಯಾಂಕ್ ವ್ಯವಹಾರ ಸಂಶಯ: ನಗರದ ಎಲ್ಲ ಬ್ಯಾಂಕ್‌ಗಳ ಶಾಖೆಗಳೂ ಎಂದಿನಂತೆಯೇ ತೆರೆದಿರುತ್ತವೆ. ಆದರೆ ಬ್ಯಾಂಕ್ ನೌಕರರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಬ್ಯಾಂಕ್ ವ್ಯವಹಾರ ನಡೆಯುವ ಸಾಧ್ಯತೆ ಕ್ಷೀಣವಾಗಿದೆ.
ಸಿನೆಮಾ ಪ್ರದರ್ಶನವಿದೆ: ನಗರದ ಮಾಲ್‌ಗಳಲ್ಲಿ ಬಂದ್ ಆಚರಿಸುವ ಬಗ್ಗೆ ಯಾವುದೇ ನಿರ್ಧಾರವಾಗದ ಕಾರಣ ಮಾಲ್‌ಗಳು ಎಂದಿನಂತೆ ಕಾರ್ಯಾಚರಿಸಲಿವೆ ಎಂದು ಸಿಟಿ ಸೆಂಟರ್ ಮತ್ತು ಭಾರತ್ ಮಾಲ್‌ನ ಸಿಬ್ಬಂದಿ ವರ್ಗ ತಿಳಿಸಿವೆ. ಅಲ್ಲದೆ ವಿವಿಧ ಮಾಲ್‌ಗಳ ಥಿಯೇಟರ್‌ಗಳಲ್ಲಿ ನಿಗದಿತ ಸಿನೆಮಾಗಳು ಎಂದಿನಂತೆಯೇ ಪ್ರದರ್ಶನಗೊಳ್ಳಲಿದೆ.
ಪೆಟ್ರೋಲ್ ಬಂಕ್ ತೆರೆಯಲಿದೆ: ನಗರದ ಯಾವುದೇ ಪೆಟ್ರೋಲ್ ಬಂಕ್‌ಗಳು ಬಂದ್ ಬೆ.ಂಬಲಿಸದ ಕಾರಣ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಲು ಸಮಸ್ಯೆಯಾಗದು. ಜ.8,9ರಂದು ಪೆಟ್ರೋಲ್ ಬಂಕ್ ಬಂದ್ ಮಾಡುವುದಿಲ್ಲ ಎಂದು ಮಂಗಳೂರು, ಉಡುಪಿ ಪೆಟ್ರೋಲ್ ಮಾಲಕರ ಸಂಘದ ಅಧ್ಯಕ್ಷ ಸತೀಶ್ ಕಾಮತ್ ತಿಳಿಸಿದ್ದಾರೆ.
ಹೊಟೇಲ್ ಬಂದ್ ಇಲ್ಲ: ಬಂದ್‌ನಿಂದ ನಿತ್ಯದ ಊಟ-ತಿಂಡಿಗೆ ಸಮಸ್ಯೆಯಾಗದು. ನಗರದ ಬಹುತೇಕ ಹೊಟೇಲ್‌ಗಳು ಬಂದ್‌ನಿಂದ ಹೊರಗುಳಿಯಲಿದೆ. ಅಲ್ಲದೆ ಎಂದಿನಂತೆ ಗ್ರಾಹಕರ ಸೇವೆಯಲ್ಲಿ ನಿರತವಾಗಲಿವೆ. ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಸಬೇಕೆಂಬ ಒತ್ತಾಯಕ್ಕೆ ಬೆಂಬಲವಿದೆ. ಆದರೆ ಹೊಟೇಲ್ ಬಂದ್ ಮಾಡುವುದಿಲ್ಲ ಎಂದು ದ.ಕ. ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ತಿಳಿಸಿದ್ದಾರೆ.
ಮೀನು ವ್ಯವಹಾರ ಅಭಾದಿತ: ಭಾರತ್ ಬಂದ್‌ನಿಂದ ಮೀನುಗಾರರು ದೂರ ಸರಿಯಲಿದ್ದಾರೆ. ನಗರದ ಎಲ್ಲ ಮೀನು ಮಾರುಕಟ್ಟೆಗಳು ತೆರೆಯಲಿದೆ ಎಂದು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.
ಬೆಂಬಲ ಇಲ್ಲ: ಜ.8 ಮತ್ತು 9 ರಂದು ನಡೆಸಲಾಗುವ ಮುಷ್ಕರವು ರಾಜಕೀಯ ಪ್ರೇರಿತವಾಗಿದೆ. ಹಾಗಾಗಿ ಬಿಜೆಪಿಯು ಮುಷ್ಕರವನ್ನು ಬೆಂಬಲಿಸುವುದಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ. ಬಿಎಂಎಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕೂಡ ಪ್ರತಿಕ್ರಿಯಿಸಿ ಬಿಎಂಎಸ್ ಕಾರ್ಯಕರ್ತರು ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.







