ಇವಿಎಂ ತಿರುಚಲು ಸಾಧ್ಯವೇ?: ಇಲ್ಲಿದೆ ಮುಖ್ಯ ಚುನಾವಣಾ ಆಯುಕ್ತರ ಪ್ರತಿಕ್ರಿಯೆ
ಚಂಡೀಗಡ, ಜ.7: ಇಲೆಕ್ಟ್ರಾನಿಕ್ ಮತಯಂತ್ರಗಳ ಕಾರ್ಯವೈಖರಿಯನ್ನು ತಜ್ಞರ ಸಮಿತಿ ನೋಡಿಕೊಳ್ಳುತ್ತಿದ್ದು ಅವುಗಳನ್ನು ತಿರುಚುವುದು ಅಸಾಧ್ಯ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ.
ಇವಿಎಂಗಳ ಸಮಗ್ರತೆ ಬಗ್ಗೆ ಅನುಮಾನಪಡುವಂತ ಯಾವುದೇ ವಿಷಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ ಹೊಸ ಶೈಕ್ಷಣಿಕ ಅಧಿವೇಶನ ಉದ್ಘಾಟನೆಯ ವೇಳೆ ಮಾತನಾಡಿದ ಅರೋರಾ ತಿಳಿಸಿದ್ದಾರೆ. ಇಲ್ಲಿ ತಾಂತ್ರಿಕ ಪ್ರಾವೀಣ್ಯತೆ ಹೊಂದಿರುವವರ ಸಾಗರವೇ ನೆರೆದಿರುವುದರಿಂದ, ಇವಿಎಂಗಳ ಕಾರ್ಯವೈಖರಿಯನ್ನು ಅತ್ಯುನ್ನತ ಅರ್ಹತೆ ಹೊಂದಿರುವ ತಾಂತ್ರಿಕ ಸಮಿತಿ ನೋಡಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನು ನೀಡಲು ನಾನು ಇಷ್ಟಪಡುತ್ತೇನೆ ಎಂದು ಅರೋರಾ ಹೇಳಿದ್ದಾರೆ. ಈ ಸಮಿತಿಯಲ್ಲಿರುವ ಸದಸ್ಯರ ಮೇಲೆ ಪ್ರಭಾವ ಬೀರಲು, ಓಲೈಸಲು ಅಥವಾ ಇನ್ಯಾವುದೇ ಒತ್ತಡಕ್ಕೆ ಒಳಗಾಗಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಹಲವು ರಾಜಕೀಯ ಪಕ್ಷಗಳು ಈ ಹಿಂದೆ ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಸಿಇಸಿ ಈ ಹೇಳಿಕೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿಶ್ವಾಸಾರ್ಹ, ನ್ಯಾಯಸಮ್ಮತ ಮತ್ತು ನಿಷ್ಪಕ್ಷ ಚುನಾವಣೆ ನಡೆಯುವಂತೆ ನೋಡಿಕೊಳ್ಳಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತೇವೆ ಮತ್ತು ಅದರಲ್ಲಿ ಯಶಸ್ವಿ ಆಗುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಸುನೀಲ್ ಅರೋರಾ ಅಭಿಪ್ರಾಯಿಸಿದ್ದಾರೆ.