ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ದ.ಕ. ಜಿಲ್ಲಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್

ಸಾಂದರ್ಭಿಕ ಚಿತ್ರ
ಮಂಗಳೂರು, ಜ.7: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮತ್ತು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಮಂಗಳೂರು ಕಮಿಷನರ್ ಟಿ.ಆರ್. ಸುರೇಶ್ ಮಾತನಾಡಿ, ಮುಷ್ಕರ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬೆಳಗ್ಗೆಯೇ ಪೆಟ್ರೋಲಿಂಗ್ ನಡೆಸಲಾಗುವುದು. ಈಗಾಗಲೇ 4 ಕೆಎಸ್ಆರ್ಪಿ ತುಕಡಿ, 12 ಸಿಆರ್ಪಿ ತುಕಡಿ ಹಾಗೂ ನಗರದ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಸಿಬ್ಬಂದಿ ಬಂದೋಬಸ್ತ್ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ನಗರದಲ್ಲಿ ಅತೀ ಸೂಕ್ಷ್ಮ, ಸೂಕ್ಷ್ಮ ಪ್ರದೇಶಗಳನ್ನು ಗಮನಿಸಿ ಆ ಪ್ರದೇಶದಲ್ಲಿ ವಿಶೇಷ ನಿಗಾಯಿರಿಸಿ ಹೆಚ್ಚುವರಿ ಸಿಬ್ಬಂದಿ ಹಾಕಲಾಗುವುದು. ಭದ್ರತೆ ವಿಷಯದಲ್ಲಿ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ, ‘ಬಸ್ ಮಾಲಕರು ಬಸ್ ಬಂದ್ ಮಾಡಲ್ಲ, ಭದ್ರತೆ ಬೇಕು’ ಎಂದು ಕೇಳಿದ್ದು ಅವರಿಗೆ ಸೂಕ್ತ ಭದ್ರತೆ ನೀಡಲು ಇಲಾಖೆ ಬದ್ಧವಾಗಿದೆ ಎಂದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾತನಾಡಿ, ಮುಷ್ಕರದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಕೆಎಸ್ಆರ್ಪಿ ತುಕಡಿ, ಎರಡು ಡಿಎಆರ್ ತುಕಡಿ, 15 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಬೆಳಗ್ಗೆಯಿಂದಲೇ 25 ಕಡೆಯಲ್ಲಿ ಪೆಟ್ರೋಲಿಂಗ್ ನಡೆಸಲಾಗುವುದು. ಜೊತೆಗೆ 100ಕ್ಕೂ ಹೆಚ್ಚು ಕಡೆ ಸೂಕ್ತ ಭದ್ರತೆ (ಪಾಯಿಂಟ್ ಔಟ್) ವಹಿಸಲಾಗಿದೆ ಎಂದು ತಿಳಿಸಿದರು.







