ಬ್ಯಾಂಕ್ ವಿಲೀನ ಯುಪಿಎ ಸರಕಾರದ ಕೊಡುಗೆ: ಬಿಜೆಪಿ ವ್ಯಂಗ್ಯ
ಮಂಗಳೂರು, ಜ.7: ಬ್ಯಾಂಕ್ ವಿಲೀನವು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ನಿರ್ಧಾರವಲ್ಲ. ಅದು ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರದ ಕೊಡುಗೆಯಾಗಿದೆ ಎಂದು ವ್ಯಂಗ್ಯವಾಡಿರುವ ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ಚಾಳ್, ಯುಪಿಎ ಸರಕಾರದ ನಿರ್ಧಾರವನ್ನು ಎನ್‌ಡಿಎ ಸರಕಾರ ಜಾರಿ ಮಾಡಿದೆಯಷ್ಟೇ ಎಂದು ತಿಳಿಸಿದ್ದಾರೆ.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಿಜೆಪಿಯು ವಿಜಯಾ ಬ್ಯಾಂಕ್ ವಿಲೀನದ ಪರವಾಗಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಜ.10 ಮತ್ತು 11ರಂದು ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಿಜಯಾ ಬ್ಯಾಂಕನ್ನು ವಿಲೀನಗೊಳಿಸದಂತೆ ಮನವಿ ಮಾಡಲಿದ್ದಾರೆ. ಅಲ್ಲದೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ ಎಂದರು.
ಜಿಲ್ಲೆಯ ಕಾಂಗ್ರೆಸ್ ನಾಯಕರು ವಿಜಯಾ ಬ್ಯಾಂಕ್ ವಿಲೀನವನ್ನು ಆಕ್ಷೇಪಿಸುತ್ತಿದ್ದಾರೆ. ಧರಣಿ, ಉಪವಾಸದ ಮಾತನ್ನು ಆಡುತ್ತಿದ್ದಾರೆ. ಈ ಹಿಂದೆ ಲೈಟ್‌ಹೌಸ್ ಹಿಲ್‌ರಸ್ತೆಗೆ ವಿಜಯಾ ಬ್ಯಾಂಕ್ ಸ್ಥಾಪಕ ಮುಲ್ಕಿ ಸುಂದರರಾಮ ಶೆಟ್ಟಿಯ ಹೆಸರು ನಾಮಕರಣ ಮಾಡಲು ಮುಂದಾದಾಗ ಕಾಂಗ್ರೆಸ್ಸಿಗರು ತಡೆದುದು ಯಾಕೆ ಎಂದು ಪ್ರಶ್ನಿಸಿದ ಹರಿಕೃಷ್ಣ ಬಂಟ್ವಾಳ್ ಒಂದು ವಾರದೊಳಗೆ ಲೈಟ್‌ಹೌಸ್ ಹಿಲ್ ರಸ್ತೆಗೆ ಸುಂದರರಾಮ ಶೆಟ್ಟಿಯ ಹೆಸರನ್ನು ಇಡಲಿ ಎಂದು ಸವಾಲು ಹಾಕಿದರು.
ಬ್ಯಾಂಖ್ ಆಫ್ ಬರೋಡವು ವಿಜಯ ಬ್ಯಾಂಕ್‌ಗಿಂತ ದೊಡ್ಡ ಬ್ಯಾಂಕ್ ಆಗಿದೆ. ಅದು 5,538 ಶಾಖೆಗಳನ್ನು ಹೊಂದಿದೆ. 107 ವಿದೇಶಿ ಶಾಖೆಗಳಿವೆ. 2008-2018ರ ಮಾರ್ಚ್ ಅಂತ್ಯದ ತನಕದ ಆಸ್ತಿ 7,19,999 ಕೋ.ರೂ.ಆಗಿದೆ. ಇದೇ ಅವಧಿಯ ಲಾಭ 29,769 ಕೋ.ರೂ. ಮತ್ತು 52,420 ಉದ್ಯೋಗಿಗಳನ್ನು ಒಳಗೊಂಡಿದೆ. ವಿಜಯಾ ಬ್ಯಾಂಕ್ 1,77,632 ಕೋ.ರೂ. ಆಸ್ತಿ ಹೊಂದಿದೆ. 2,031 ಶಾಖೆಗಳಿವೆ. 15,679 ಸಿಬ್ಬಂದಿ ಇದ್ದಾರೆ. 2008ರಿಂದ ಮಾರ್ಚ್ 2018ರ ತನಕದ ಲಾಭ 5,446 ಕೋ.ರೂ. ಆಗಿದೆ ಎಂದು ಹರಿಕೃಷ್ಣ ಬಂಟ್ವಾಳ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಭಾ ಮಾಲಿನಿ, ವಕ್ತಾರರಾದ ಸತೀಶ್ ಪ್ರಭು, ಜಿತೇಂದ್ರ ಕೊಟ್ಟಾರಿ, ಕೋಶಾಧಿಕಾರಿ ಸಂಜಯ ಪ್ರಭು, ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ದೀಪಾ ಪೈ, ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಉಪಸ್ಥಿತರಿದ್ದರು.







