ಪ್ರವಾದಿ ನಿಂದನೆ: ಮುಸ್ಲಿಮ್ ಒಕ್ಕೂಟದಿಂದ ಗೃಹ ಸಚಿವರ ಭೇಟಿ

ಮಂಗಳೂರು, ಜ.7: ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನಮಕ್ಕನವರ್ ಟಿ.ವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಮುಸ್ಲಿಮ್ ಒಕ್ಕೂಟದ ನಿಯೋಗ ಗೃಹ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಂದನೆ ಆರೋಪ ಎದುರಿಸುತ್ತಿರುವ ನಿರೂಪಕನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ನೂರಾರು ದೂರುಗಳು ದಾಖಲಾಗಿದ್ದು, ಪ್ರಕರಣಗಳೂ ದಾಖಲಾಗಿವೆ. ಈ ಬೆಳವಣಿಗೆಗಳಿಂದಾಗಿ ಮುಸ್ಲಿಮ್ ಸಮುದಾಯದ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳಿಗೆ ಘಾಸಿಯಾಗಿದೆ. ಈ ಬಗ್ಗೆ ಸರಕಾರವು ಗಂಭೀರವಾಗಿ ಪರಿಗಣಿಸಿ ಮುಸ್ಲಿಮ್ ಸಮುದಾಯದ ಧಾರ್ಮಿಕ ನಂಬಿಕೆಗೆ ನಿರಂತರ ಧಕ್ಕೆಯಾಗುತ್ತಿರುವ ಹಿನ್ನೆಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒಕ್ಕೂಟ ನಿಯೋಗ ಒತ್ತಾಯಿಸಿತು.
ನಿಯೋಗದಲ್ಲಿ ಸದಸ್ಯರಾದ ಅಬ್ದುಲ್ ಜಲೀಲ್ ಅದ್ದಾಕ, ಸಿ.ಎಂ ಮುಸ್ತಫಾ, ಮುಹಮ್ಮದ್ ಹನೀಫ್ ಯು., ಸಿದ್ದೀಖ್ ತಲಪಾಡಿ, ಶಬೀರ್ ಅಬ್ಬಾಸ್, ಮುಹಮ್ಮದ್ ಅಶ್ರಫ್ ಬದ್ರಿಯಾ, ಅಬೂಬಕರ್, ಅಬ್ದುಲ್ ರಹಿಮಾನ್ ಬಟ್ಕಾಳಿ ಮತ್ತಿತ್ತರರು ಉಪಸ್ಥಿತರಿದ್ದರು.





