ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಗೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು, ಜ.7: ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮ ಅವರಿಗೆ ರಾಜ್ಯ ಗೃಹ ಇಲಾಖೆ ಜಾರಿಗೊಳಿಸಿದ್ದ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣದ ಸಂಬಂಧ ಕೇಂದ್ರೀಯ ಆಡಳಿತ ನ್ಯಾಯಮಂಡಳಿ ಮುಂದೆ(ಸಿಎಟಿ) ಆರ್.ಪಿ. ಶರ್ಮ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೆ 2018ರ ಅ.27ರಂದು ನೀಡಿದ್ದ ನೋಟಿಸ್‌ಗೆ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿತು.
ಶೋಕಾಸ್ ನೋಟಿಸ್ ರದ್ದುಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಮಧ್ಯಂತರ ಆದೇಶ ನೀಡದ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ ಕ್ರಮ ಪ್ರಶ್ನಿಸಿ ಆರ್.ಪಿ. ಶರ್ಮ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಏನಿದು ಪ್ರಕರಣ: ಕರ್ನಾಟಕ ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ತಾವು ವೈಯಕ್ತಿಕ ನೆಲೆಯಲ್ಲಿ 2018ರ ಮಾರ್ಚ್‌ನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಸುಗಮ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಬಗ್ಗೆ ವಿವರವಾಗಿ ಚರ್ಚೆ ನಡೆಸಲು ಎಲ್ಲ ಐಪಿಎಸ್ ಅಧಿಕಾರಿಗಳ ಸಭೆ ಕರೆಯುವಂತೆ ಮನವಿ ಮಾಡಿ ಪತ್ರ ಬರೆದಿದ್ದೆ. ಆ ಪತ್ರವನ್ನು ತಪ್ಪಾಗಿ ಅರ್ಥೈಸಿ, ಅಶಿಸ್ತು ಎಂದು ಪರಿಗಣಿಸಲಾಗಿದೆ ಎಂದು ಶರ್ಮ ದೂರಿದ್ದಾರೆ.
ಆ ಪತ್ರದ ಆಧಾರದ ಮೇಲೆ ತಮಗೆ ಅ.27ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ತಮ್ಮ ಹೆಸರನ್ನು ರಾಷ್ಟ್ರಪತಿಗಳ ಪದಕಕ್ಕೆ ಕಳುಹಿಸದಂತೆ ತಡೆ ಹಿಡಿಯುವ ಉದ್ದೇಶದಿಂದಲೇ 7 ತಿಂಗಳ ನಂತರ ನೋಟಿಸ್ ನೀಡಲಾಗಿದೆ ಎಂದು ಶರ್ಮ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.







